ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಫೇಸ್‌ಬುಕ್ ಖಾತೆಯಿಂದ ವಿಡಿಯೊವೊಂದವನ್ನು ತೆಗೆದುಹಾಕಿದ್ದಕ್ಕೆ ಮೆಟಾ ಸಂಸ್ಥೆಯು, ಕೇಂದ್ರ ಸರ್ಕಾರದ ಕ್ಷಮೆಯಾಚಿಸಿದೆ. ಅಲ್ಲದೇ ಇದು ತಾಂತ್ರಿಕ ದೋಷದಿಂದ ನಡೆದ ಪ್ರಮಾದ ಎಂದೂ ಕಂಪನಿ ಸ್ಪಷ್ಟನೆ ನೀಡಿದೆ.
ತಾಂತ್ರಿಕ ದೋಷದಿಂದ ಆ ವಿಡಿಯೊ ಡಿಲೀಟ್ ಆಗಿತ್ತು.
ತಕ್ಷಣವೇ ಅದನ್ನು ಸರಿಪಡಿಸಿ, ವಿಡಿಯೊವನ್ನು ಮರುಸ್ಥಾಪಿಸಲಾಗಿದೆ ಎಂಬ ಮೆಟಾ ವಕ್ತಾರರ ಹೇಳಿಕೆ ಉಲ್ಲೇಖಿಸಿ ಸುದ್ದಿಸಂಸ್ಥೆ 'ಎಎನ್‌ಐ' ವರದಿ ಮಾಡಿದೆ.
ಘಟನೆಯನ್ನು ಕೇಂದ್ರ ಸರ್ಕಾರ ತೀವ್ರ ಗಂಭೀರವಾಗಿ ಪರಿಗಣಿಸಿದ್ದು, ವಿಡಿಯೊ ತೆಗೆದುಹಾಕಲು ಕಾರಣವಾದ ಸಂದರ್ಭಗಳು ಮತ್ತು ಘಟನಾವಳಿ ಬಗ್ಗೆ ಪರಿಶೀಲಿಸುತ್ತಿದೆ. ಅಲ್ಲದೇ ಈ ಸಂಬಂಧ, ಮೆಟಾ ಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಸಮನ್ಸ್ ಜಾರಿ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದ ವಿದ್ಯಾರ್ಥಿ ಪ್ರತಿಭಟನೆಯ ಸಂದರ್ಭದಲ್ಲಿ ಜೆನ್- ಝೀಗಳನ್ನು ಉದ್ದೇಶಿಸಿ ಪ್ರಧಾನಿ ಮೋದಿ ಹಂಚಿಕೊಂಡ ವಿಡಿಯೊ ಆದಾಗಿತ್ತು. 'ಸಾರ್ವಜನಿಕ ಪರೀಕ್ಷೆಗಳ ತಿದ್ದುಪಡಿ ಮಸೂದೆ-2026' ಹಾಗೂ ನಂದನ್ ನಿಲೇಕಣಿ ನೇತೃತ್ವದ ಕಾರ್ಯಪಡೆ ರಚನೆಯ ಕುರಿತು ಪ್ರಧಾನಿ ಮಾತನಾಡಿದ್ದರು.
ಪ್ರಜಾಪ್ರಭುತ್ವದ ಮೇಲಿನ ಹಸ್ತಕ್ಷೇಪ
ಈ ಬಗ್ಗೆ ಬಿಜೆಪಿ ನಾಯಕ ತಜಿಂದರ್ ಪಾಲ್ ಸಿಂಗ್ ಬಗ್ಗಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ಧಾರೆ. ಮೆಟಾ ಸಂಸ್ಥೆ ಭಾರತದ ಡಿಜಿಟಲ್ ಸಾರ್ವಭೌಮತ್ವ ಮತ್ತು ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನಿಯಮಬಾಹಿರವಾಗಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಮೆಟಾ ತನ್ನೆಲ್ಲಾ ಮಿತಿಗಳನ್ನು ಮೀರಿದೆ. ಭಾರತದ ಪ್ರಧಾನಿಯವರ ಪೋಸ್ಟ್ ಅನ್ನು ತೆಗೆದುಹಾಕಲು ಈ ವಿದೇಶಿ ಪ್ಲಾಟ್‌ಫಾರ್ಮ್‌ಗೆ ಅಧಿಕಾರ ನೀಡಿದವರು ಯಾರು? ಎಂದು ಪ್ರಶ್ನಿಸಿದ್ದಾರೆ. ಇದು ಕೇವಲ ಕಂಟೆಂಟ್ ನಿಯಂತ್ರಣವಲ್ಲ, ಬದಲಿಗೆ ಭಾರತದ ಪ್ರಜಾಪ್ರಭುತ್ವದ ಮೇಲಿನ ಹಸ್ತಕ್ಷೇಪ. ಯಾರ 'ಕಾನೂನಾತ್ಮಕ ಮನವಿ'ಯನ್ನು ಆಧರಿಸಿ ಫೇಸ್‌ಬುಕ್‌ನಿಂದ ಈ ವಿಡಿಯೊ ತೆಗೆದುಹಾಕಿದೆ ಎಂಬುದನ್ನು ಮೆಟಾ ದೇಶದ ಜನರಿಗೆ ಬಹಿರಂಗಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
- Meta releases a statement on blocking PM Modi's video on Facebook. "The content was removed in error and has since been restored." says a Meta Spokesperson.


