ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಪ್ರತಿಭಟನೆ ಸಂದರ್ಭದಲ್ಲಿ ಉಚಿತವಾಗಿ ಆಹಾರವನ್ನು ಹಂಚಿದ್ದ ಜುನೈದ್ ಮಲಿಕ್ ಅವರು, ಪೊಲೀಸರ ಕ್ರಮದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಪೊಲೀಸರು ಅನಧಿಕೃತವಾಗಿ ತಮ್ಮನ್ನು ವಶಕ್ಕೆ ಪಡೆದಿದ್ದರು ಮತ್ತು ಬೆದರಿಕೆ ಹಾಕಿದ್ದರು ಎಂದು ಆರೋಪಿಸಿ ನ್ಯಾಯಾಲಯಕ್ಕೆ ಅವರು ಅರ್ಜಿ ಸಲ್ಲಿಸಿದ್ದಾರೆ.
'ಜುಲೈ 24ರ ಮಧ್ಯರಾತ್ರಿ ದೆಹಲಿ ಪೊಲೀಸರು ನನ್ನನ್ನು ಕರೆದೊಯ್ದರು. ಸುಮಾರು ಐದರಿಂದ ಆರು ತಾಸು ಪೊಲೀಸ್ ವಾಹನದಲ್ಲಿಯೇ ಕೂಡಿ ಹಾಕಿದ್ದರು. ನನ್ನ ಮೊಬೈಲ್ ಫೋನ್ ವಶಕ್ಕೆ ಪಡೆದಿದ್ದರು. ಪ್ರತಿಭಟನಕಾರರಿಗೆ ಆಹಾರ ಹಂಚಲು ಹಣದ ಮೂಲ ಯಾವುದು ಎಂದು ಪದೇ ಪದೇ ಪ್ರಶ್ನಿಸುತ್ತಿದ್ದರು. ಅನಂತರ ಡೆಹ್ರಡೂನ್‌ನ ರಸ್ತೆಯೊಂದರಲ್ಲಿ ಬಿಟ್ಟು ಹೋಗಿದ್ದರು' ಎಂದು ಅರ್ಜಿಯಲ್ಲಿ ದೂರಿದ್ದಾರೆ.
'ಗಾಜಿಯಾಬಾದ್ ಪೊಲೀಸರು ನನ್ನ ನಿವಾಸದಲ್ಲಿ ಶೋಧ ನಡೆಸಿದರು. ವಿವಾಹಿತ ಸಹೋದರಿಯ ಮೇರಠ್ ನಿವಾಸಕ್ಕೆ ತೆರಳಿ ಆಕೆಯ ಮಾವ ಮತ್ತು ಬಾಮೈದನನ್ನು ವಶಕ್ಕೆ ಪಡೆದು, ಸ್ವಲ್ಪ ಸಮಯದ ಬಳಿಕ ಬಿಡುಗಡೆ ಮಾಡಿದರು' ಎಂದು ಆರೋಪಿಸಿದ್ದಾರೆ.
ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಬೇಕು. ನನ್ನ ಮತ್ತು ಕುಟುಂಬದ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ನಿರ್ದೇಶನ ನೀಡಬೇಕು ಎಂದು ಕೋರಿದ್ದಾರೆ.

