ಶ್ರೀನಗರ: ಕಾಶ್ಮೀರದಲ್ಲಿ ಪ್ರತಿಭಟನಾಕಾರರ ಮೇಲಿನ ಹಿಂಸಾಚಾರದ ಕುರಿತು ನಾನು ನೀಡಿದ ಹೇಳಿಕೆಗಳು ಯಾರಿಗಾದರೂ ನೋವುಂಟು ಮಾಡಿದ್ದರೆ ಕ್ಷಮೆಯಾಚಿಸುತ್ತೇನೆ ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಹೇಳಿದ್ದಾರೆ.
ಪರೀಕ್ಷಾ ಅಕ್ರಮಗಳ ವಿರುದ್ಧ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಲು ಮುಫ್ತಿ ಅವರು ಜುಲೈ 23 ರಂದು ಜಂತರ್ ಮಂತರ್‌ಗೆ ಭೇಟಿ ನೀಡಿದ್ದರು.
ಈ ವೇಳೆ, ಕಾಶ್ಮೀರದಲ್ಲಿ ಪೆಲೆಟ್ ಗನ್‌ಗಳ ಬಳಕೆ ಮಾಡುವುದನ್ನು ಸಮರ್ಥಿಸಿಕೊಂಡಿದ್ದರು.
'ನಾವು ಇಂತಹ ದೃಶ್ಯವನ್ನು ಮೊದಲ ಬಾರಿಗೆ ದೆಹಲಿಯಲ್ಲಿ ನೋಡುತ್ತಿದ್ದೇವೆ. ಆದರೆ ನಾವು ಕಳೆದ ಹಲವು ವರ್ಷಗಳಿಂದ ಕಾಶ್ಮೀರದಲ್ಲಿ ಇದನ್ನು ನೋಡುತ್ತಾ ಬಂದಿದ್ದೇವೆ. ಅಲ್ಲಿ ಉಗ್ರಗಾಮಿಗಳ ವಿರುದ್ಧ ಭದ್ರತಾ ಪಡೆಗಳು ಹೋರಾಡುತ್ತಿರುವುದರಿಂದ ಪೆಲೆಟ್‌ಗಳ ಬಳಕೆ ಸಾಮಾನ್ಯ. ಆದರೆ, ಇಲ್ಲಿರುವರ್‍ಯಾರು ಉಗ್ರರಲ್ಲ' ಎಂದು ಹೇಳಿದ್ದರು.
ಮುಫ್ತಿ ಅವರ ಹೇಳಿಕೆಯನ್ನು ವಿರೋಧಿಸಿದ್ದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಕಾಶ್ಮೀರದ ಪ್ರತಿಭಟನಾಕಾರರ ವಿರುದ್ಧ ಬಲಪ್ರಯೋಗ ಮಾಡುವುದನ್ನು ಅವರು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದರು.
ಏತನ್ಮಧ್ಯೆ, ಜಮ್ಮು ಮತ್ತು ಕಾಶ್ಮೀರದಾದ್ಯಂತ 370ನೇ ವಿಧಿಯ ಮರುಸ್ಥಾಪನೆ ಮತ್ತು ಕಾಶ್ಮೀರ ಸಮಸ್ಯೆಯ ಪರಿಹಾರಕ್ಕಾಗಿ ಆಗಸ್ಟ್ 5 ರಂದು ಜಿಲ್ಲಾ ಕೇಂದ್ರಗಳಲ್ಲಿ ಶಾಂತಿಯುತ ಪ್ರತಿಭಟನೆಗಳನ್ನು ನಡೆಸುವುದಾಗಿ ಪಿಡಿಪಿ ಮಂಗಳವಾರ ಪ್ರಕಟಿಸಿದೆ.

