ಕಾಸರಗೋಡು: ಜಿಲ್ಲೆಯಲ್ಲಿ ಮತ್ತೆ ಮಳೆ ಬಿರುಸುಪಡೆದುಕೊಂಡಿದ್ದು, ಕೇಂದ್ರ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಕಾಸರಗೋಡು ಹಾಗೂ ಕಣ್ಣೂರು ಜಿಲ್ಲೆಯಲ್ಲಿ ಜು. 21ರಂದು ಯೆಲ್ಲೋ ಅಲರ್ಟ್ ಜಾರಿಗೊಳಿಸಲಾಗಿದೆ. ಈ ಸಂದರ್ಭ ಗುಡುಗು, ಮಿಂಚಿನಿಂದ ಕೂಡಿದ ಮಳೆಯಾಗುವ ಸಾಧ್ಯತೆಯಿದ್ದು, ಜನರು ಜಾಗ್ರತೆ ಪಾಲಿಸುವಂತೆ ಸೂಚಿಸಲಾಗಿದೆ.
ಬಿರುಸಿನ ಮಳೆಗೆ ಬಾಡೂರು ಕೇರಿ ನಿವಾಸಿ ಆನಂದ ಎಂಬವರ ಮನೆಯ ಹಿಂಬದಿಯ ಗುಡ್ಡ ಭಾನುವಾರ ರಾಥ್ರಿ ಹಾಗೂ ಸೋಮವಾರ ಬೆಳಗ್ಗೆ ಕುಸಿದು ಬಿದ್ದಿದೆ. ಈ ಸಂದರ್ಭ ಮಣ್ಣಿನೊಂದಿಗೆ ಬೃಹತ್ ಬಂಡೆಕಲ್ಲು ಮನೆ ಅಡುಗೆ ಕೊಠಡಿಗೆ ತಾಗಿ ನಿಂತಿದ್ದು, ಅಪಾಯ ಆಹ್ವಾನಿಸುತ್ತಿದೆ. ಗುಡ್ಡ ಮತ್ತಷ್ಟು ಕುಸಿಯುವ ಭೀತಿಯಲ್ಲಿದ್ದು, ಬಾಡೂರು ಗ್ರಾಮಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮನೆಯಲ್ಲಿ ಆನಂದ ಅವರ ಅಸೌಖ್ಯ ಪೀಡಿತರಾದ ತಾಯಿ ಲಕ್ಷ್ಮೀ ಹಾಗೂ ಆನಂದ ಅವರ ಪತ್ನಿ, ಮಕ್ಕಳು ವಾಸಿಸುತ್ತಿದ್ದಾರೆ.

