ನವದೆಹಲಿ: 'ಪಶ್ಚಿಮ ಏಷ್ಯಾ ಸಂಘರ್ಷ ಮುಂದುವರಿದಿರುವುದರಿಂದ ಹೊರ್ಮುಜ್ ಜಲಸಂಧಿ ಮೂಲಕ ಸಾಗುವ ಹಡಗುಗಳಲ್ಲಿ ಭಾರತೀಯ ನಾವಿಕರನ್ನು ಕರ್ತವ್ಯಕ್ಕೆ ನಿಯೋಜಿಸಬಾರದು' ಎಂದು ಕೇಂದ್ರ ಸರ್ಕಾರವು ಹಡಗು ಕಂಪನಿಗಳು, ನೇಮಕಾತಿ ಸಂಸ್ಥೆಗಳು, ಮತ್ತು ಹಡಗುಗಳ ವ್ಯವಸ್ಥಾಪಕರಿಗೆ ನಿರ್ದೇಶನ ನೀಡಿದೆ.
ಪರ್ಷಿಯನ್ ಕೊಲ್ಲಿ ಮತ್ತು ಹೊರ್ಮುಜ್ ಜಲಸಂಧಿ ಮೂಲಕ ಕಾರ್ಯನಿರ್ವಹಿಸುವ ಹಡಗುಗಳನ್ನು ಗಮನದಲ್ಲಿ ಇರಿಸಿಕೊಂಡು ಸಾಗರ ಆಡಳಿತ ಮಹಾನಿರ್ದೇಶನಾಲಯ (ಡಿಜಿಎಂಎ) ಗುರುವಾರ ಈ ನಿರ್ದೇಶನ ನೀಡಿದೆ. ಹೊರ್ಮುಜ್ ಜಲಸಂಧಿ ಮಾರ್ಗದಲ್ಲಿ ಉನ್ನತ ಮಟ್ಟದ ಭದ್ರತಾ ಕ್ರಮಗಳನ್ನು ಕೈಗೊಳ್ಳುವಂತೆಯೂ ಸೂಚಿಸಿದೆ.
ಅಂತರರಾಷ್ಟ್ರೀಯ ಹಡಗು ಮತ್ತು ಬಂದರು ಸುರಕ್ಷತೆ (ಐಎಸ್‌ಪಿಎಸ್) ಕಾನೂನಿನ ಅನ್ವಯ ಜಾರಿಗೊಳಿಸಲಾದ ಎಲ್ಲ ಭದ್ರತಾ ಮಾರ್ಗಸೂಚಿಗಳು, ನಿಗಾ ವ್ಯವಸ್ಥೆಯನ್ನು ಕಡ್ಡಾಯವಾಗಿ ಪಾಲಿಸುವಂತೆ 'ಡಿಜಿಎಂಎ' ಹೇಳಿದೆ.
ಹಡಗುಗಳ ಮಾಲೀಕರು, ವ್ಯವಸ್ಥಾಪಕರು ಮತ್ತು ನಾವಿಕರನ್ನು ನೇಮಕ ಮಾಡಿಕೊಳ್ಳುವ ಏಜೆನ್ಸಿಗಳು (ಆರ್‌ಪಿಎಸ್‌ಎಲ್) ಮುಂದಿನ ಆದೇಶದವರೆಗೆ ಭಾರತೀಯ ನಾವಿಕರನ್ನು ಹೊರ್ಮುಜ್ ಜಲಸಂಧಿಯಲ್ಲಿ ಸಾಗುವ ಹಡಗುಗಳಲ್ಲಿ ನಿಯೋಜಿಸಬಾರದು ಎಂದು 'ಡಿಜಿಎಂಎ' ಹೇಳಿದೆ.
ಹೊರ್ಮುಜ್ ಜಲಸಂಧಿ ಮೂಲಕ ಸಾಗುತ್ತಿದ್ದ ಎಂ.ಟಿ ಆಲ್ ಬಹಿಯಾ ಮತ್ತು ಎಂ.ಟಿ ಮೊಂಬಾಸಾ ಹೆಸರಿನ ಹಡಗುಗಳ ಮೇಲೆ ಇರಾನ್ ಇತ್ತೀಚೆಗೆ ದಾಳಿ ನಡೆಸಿತ್ತು. ಈ ಎರಡು ಹಡಗುಗಳಲ್ಲಿ 30 ಭಾರತೀಯ ನಾವಿಕರು ಸೇರಿ ಒಟ್ಟು 46 ಸಿಬ್ಬಂದಿ ಇದ್ದರು. ಆಲ್ ಬಹಿಯಾ ಹಡಗಿನಲ್ಲಿದ್ದ ಒಬ್ಬ ಭಾರತೀಯ ಸಿಬ್ಬಂದಿ ಮೃತಪಟ್ಟಿದ್ದರು. ಮೊಂಬಾಸಾ ಹಡಗಿನಲ್ಲಿದ್ದ 9 ಭಾರತೀಯರು ಗಾಯಗೊಂಡಿದ್ದರು.
ಹೊರ್ಮುಜ್ ಜಲಸಂಧಿ ಮೂಲಕ ಸಾಗುವ ಹಡಗುಗಳಲ್ಲಿ ನಿಯೋಜನೆಗೊಂಡಿರುವ ಭಾರತೀಯ ನಾವಿಕರು, ಸಿಬ್ಬಂದಿ ಕುರಿತು ಕ್ಷಣ ಕ್ಷಣದ ಸಮಗ್ರ ಮಾಹಿತಿ ಸಂಗ್ರಹಿಸುವಂತೆ ಕೇಂದ್ರ ಸರ್ಕಾರವು ಹಡಗು ಪ್ರಾಧಿಕಾರಕ್ಕೆ ಇತ್ತೀಚೆಗೆ ಸೂಚನೆ ನೀಡಿತ್ತು. ಹೊರ್ಮುಜ್ ಮತ್ತು ಒಮಾನ್ ಕರಾವಳಿಯಲ್ಲಿ ಪ್ರತಿ ಹಡಗಿನ ಕಾರ್ಯನಿರ್ವಹಣೆ ಮೇಲೆ ನಿಗಾ ವಹಿಸುವ ಸೌಲಭ್ಯ ಅಭಿವೃದ್ಧಿಪಡಿಸುವಂತೆ ಬಂದರು ಸಚಿವ ಸರ್ಬಾನಂದ ಸೋನಾವಾಲ್ 'ಡಿಜಿಎಂಎ'ಗೆ ಸೂಚಿಸಿದ್ದಾರೆ.

