ನವದೆಹಲಿ: ವಿಮಾನ ನಿಲ್ದಾಣಗಳ ನಿರ್ವಹಣೆಯಲ್ಲಿ ತೊಡಗಿರುವ ಕಂಪನಿಗಳು ವಿಮಾನಯಾನ ಕಂಪನಿಗಳ ಮಾಲೀಕರಾಗಲು ಅವಕಾಶ ನೀಡಿದರೆ ಭಾರಿ ಪ್ರಮಾಣದಲ್ಲಿ ಹಿತಾಸಕ್ತಿ ಸಂಘರ್ಷ ಉಂಟಾಗಲಿದೆ ಎಂದು ಇಂಡಿಗೊ ಕಂಪನಿಯ ಸಹ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಭಾಟಿಯಾ ಹೇಳಿದ್ದಾರೆ.
ಎಂಟು ವಿಮಾನ ನಿಲ್ದಾಣಗಳ ನಿರ್ವಹಣೆ ಮಾಡುತ್ತಿರುವ ಅದಾನಿ ಸಮೂಹವು ವಿಮಾನಯಾನ ಕ್ಷೇತ್ರ ಪ್ರವೇಶಿಸುವ ಪ್ರಸ್ತಾವ ಸಿದ್ಧಪಡಿಸಿದೆ, ವಿಮಾನ ನಿಲ್ದಾಣಗಳ ನಿರ್ವ ಹಣೆಯ ಹೊಣೆ ಹೊತ್ತಿರುವ ಕಂಪನಿಗಳು ವಿಮಾನಯಾನ ಕಂಪನಿಗಳ ಮಾಲೀಕರಾಗಲು ಅವಕಾಶ ಕಲ್ಪಿಸಲು ಕೇಂದ್ರ ಸರ್ಕಾರವು ನಿಯಮ ಸಡಿಲಿಕೆ ಬಗ್ಗೆ ಪರಿಶೀಲನೆ ನಡೆಸಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಭಾಟಿಯಾ ಈ ಹೇಳಿಕೆ ನೀಡಿದ್ದಾರೆ.
'ಸುದ್ದಿಯಲ್ಲಿ ನಿಜಾಂಶ ಇದ್ದರೆ, ಅಂತಹ ಕ್ರಮ ಹಿಂದೆ ಜಗತ್ತಿನಲ್ಲಿ ಎಲ್ಲಿಯೂ ಆಗಿಲ್ಲ... ಹಾಗೆ ಆದಲ್ಲಿ ಭಾರಿ ಪ್ರಮಾಣದ ಹಿತಾಸಕ್ತಿ ಸಂಘರ್ಷ ಸೃಷ್ಟಿಯಾಗುತ್ತದೆ' ಎಂದು ಭಾಟಿಯಾ ಅವರು ತಮ್ಮ ಕಂಪನಿಯ ಹಣಕಾಸು ಫಲಿತಾಂಶವನ್ನು ಚರ್ಚಿಸಲು ಕರೆದಿದ್ದ ಮಾರುಕಟ್ಟೆ ತಜ್ಞರ ಸಭೆಯಲ್ಲಿ ಹೇಳಿದ್ದಾರೆ.

