ಕಾಸರಗೋಡು: ಕರ್ನಾಟಕದ ಬಿಜೆಪಿ ಯುವಮೋರ್ಚಾ ನಾಯಕ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಆರೋಪಿಗಳಿಗೆ ಕೇರಳದಲ್ಲಿ ತಲೆಮರೆಸಿಕೊಂಡಿರಲು ಆಶ್ರಯ ಕಲ್ಪಿಸಿದವರನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಸಮಗ್ರ ತನಿಖೆ ನಡೆಸುವಂತೆ ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ.ಎಲ್ ಅಶ್ವಿನಿ ಆಗ್ರಹಿಸಿದ್ದಾರೆ.
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ಕೊಚ್ಚಿಯಿಂದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಕ್ರಮದಿಂದ ಕೇರಳ ಭಯೋತ್ಪಾದಕರಿಗೆ ನೆಲೆ ಒದಗಿಸುವ ತಾಣವಾಗಿ ಬದಲಾಗಿರುವುದು ಸಾಬೀತಾಗಿದೆ. ಕೇರಳದಲ್ಲಿ ಪ್ರಸಕ್ತ ವಿ.ಡಿ. ಸತೀಶನ್ ಅವರ ಪೆÇಲೀಸರು ಕೂಡಾ ಪಿಣರಾಯಿ ವಿಜಯನ್ ನೇತೃತ್ವದ ಪೆÇಲೀಸರ ಹಾದಿಯಲ್ಲೇ ಸಾಗುತ್ತಿದ್ದಾರೆ. ಧಾರ್ಮಿಕ ಉಗ್ರಗಾಮಿಗಳಿಗೆ, ಮಾವೋವಾದಿಗಳಿಗೆ ಮತ್ತು ಭಯೋತ್ಪಾದಕರಿಗೆ ಕೇರಳವು ಸುರಕ್ಷಿತ ತಾಣವಾಗಿ ಮಾರ್ಪಟ್ಟಿರುವುದು ಇದರಿಂದ ಸಾಬೀತಾಗಿದೆ.
ಪ್ರವೀಣ್ ನೆಟ್ಟಾರು ಕೊಲೆ ನಡೆದು ನಾಲ್ಕು ವರ್ಷಗಳು ಕಳೆದರೂ, ಆರೋಪಿಗಳು ಕೇರಳದಲ್ಲಿ ಸುರಕ್ಷಿತವಾಗಿ ನೆಲೆಸಲು ಯಾರು ಸೌಲಭ್ಯ ಮಾಡಿಕೊಟ್ಟಿದ್ದಾರೆ ಎಂಬುದರ ಕುರಿತು ತನಿಖೆಯಾಗಬೇಕಿದೆ ಎಂದು ಅವರು ಹೇಳಿದರು. ಎಲ್‍ಡಿಎಫ್ ಮತ್ತು ಯುಡಿಎಫ್ ಆಡಳಿತಾವಧಿಯಲ್ಲಿ ಇಂತಹ ಪ್ರಕರಣಗಳ ಆರೋಪಿಗಳನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ಕೇರಳ ಪೆÇಲೀಸರಿಗೆ ಪರಿಣಾಮಕಾರಿಯಾಗಿ ಮಧ್ಯಪ್ರವೇಶಿಸಲು ಸಾಧ್ಯವಾಗುತ್ತಿಲ್ಲ ಎಂದು ಅಶ್ವಿನಿ ಆರೋಪಿಸಿದರು.
ಮಾಹಿತಿ ಸೋರಿಕೆಯಾಗಬಹುದೆಂಬ ಆತಂಕದಿಂದ, ಎನ್‍ಐಎ ಹಲವು ಬಾರಿ ಸ್ಥಳೀಯ ಪೆÇಲೀಸರಿಗೆ ಪೂರ್ವಮಾಹಿತಿ ನೀಡದೆ ದಾಳಿ ನಡೆಸುತ್ತದೆ ಎಂದು ಸಾಮಾನ್ಯವಾಗಿ ವಿಶ್ಲೇಷಿಸಲಾಗುತ್ತದೆ. ಇಂತಹ ಪರಿಸ್ಥಿತಿಯು ಕೇರಳದ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ ಎಂದು ಅವರು ಹೇಳಿದರು.
ಧಾರ್ಮಿಕ ಉಗ್ರಗಾಮಿಗಳು ಕೇರಳದಲ್ಲಿ ಸುರಕ್ಷಿತವಾಗಿರಲು ಎಡರಂಗ ಮತ್ತು ಐಕ್ಯರಂಗ ಅನುಸರಿಸುತ್ತಿರುವ ಅಲ್ಪಸಂಖ್ಯಾತರ ತುಷ್ಠೀಕರಣ ನೀತಿಯೇ ಕಾರಣ ಎಂದು ಎಂ.ಎಲ್. ಅಶ್ವಿನಿ ಆರೋಪಿಸಿದ್ದಾರೆ.



