ಪೆರ್ಲ: ಹೊಸನಗರ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರ ದಿವ್ಯಾಶೀರ್ವಾದದೊಂದಿಗೆ ಚಟುಟಿಕೆ ನಡೆಸುತ್ತಿರುವ ಪೆರ್ಲ ಬಜಕೂಡ್ಲು ಅಮೃತಧಾರಾ ಗೋಶಾಲೆಯ 'ಬಂಗಾರಿ'ಹಸು ದೀರ್ಘ ಕಾಲದ ಅಸೌಖ್ಯದ ನಂತರ ಬುಧವಾರ ಇಹಲೋಕ ತ್ಯಜಿಸಿದೆ. ಕಾಸರಗೋಡು ಗಿಡ್ಡ ತಳಿಯಲ್ಲಿ ಅತ್ಯಂತ ಗಿಡ್ಡ ದನವೆಂಬ ಲಿಮ್ಕಾ ಬುಕ್ ಆಫ್ ರೆಕಾರ್ಡ್‍ನಲ್ಲಿ 'ಬಂಗಾರಿ'ಹೆಸರು ದಾಖಲಾಗಿದೆ.
ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ 2024 ಆರಂಭಗೊಂಡ ಅಮೃತಧಾರಾ ಗೋಶಾಲೆಗೆ 2004ರಲ್ಲಿ ಬಂಗಾರಿಯ ಆಗಮನವಾಗಿದ್ದು, ಗೋಶಾಲೆಯ ಮುದ್ದಿನ ಹಸುವಾಗಿ ಗುರುತಿಸಲ್ಪಟ್ಟಿತ್ತು.
ಪ್ರಸಕ್ತ ಬಜಕೂಡ್ಲು ಪಳ್ಳಕಾನದ ಹೊಸ ನಿವೇಶನದಲ್ಲಿ ಅಮೃತಧಾರಾ ಗೋಶಾಲೆ ಚಟುವಟಿಕೆ ನಡೆಸುತ್ತಿದೆ. 26ವರ್ಷ ಪ್ರಾಯದ ಬಂಗಾರಿ ಕಳೆದ ಕೆಲವು ಸಮಯದಿಂದ ಅಸೌಖ್ಯದಿಂದ ಬಳಲುತ್ತಿದ್ದು, ಗೋಶಾಲೆಯಲ್ಲಿ ಚಿಕಿತ್ಸೆಯಲ್ಲಿತ್ತು. ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಅವರು ಹೆಚ್ಚು ಪ್ರೀತಿ ತೋರುತ್ತಿದ್ದ ಹಸು ಇದಾಗಿದ್ದು, ಗೋಶಾಲೆಯಲ್ಲಿ ಹೆಚ್ಚಿನ ಕಾಳಜಿಯಿಂದ ಬಂಗಾರಿಯನ್ನು ಸಲಹಲಾಗುತ್ತಿತ್ತು.



