ಕಾಸರಗೋಡು: ಜಿಲ್ಲೆಯಲ್ಲಿ, ಕೇರಳ ರಾಜ್ಯ ಸಾಕ್ಷರತಾ ಮಿಷನ್‍ನ 7ನೇ ತರಗತಿಯ ಸಮಾನತಾ ಕೋರ್ಸ್‍ನ 19ನೇ ಬ್ಯಾಚ್‍ಗಾಗಿ ಆರು ಕೇಂದ್ರಗಳಲ್ಲಿ ನಡೆದ ಪರೀಕ್ಷೆಗೆ 57 ಮಂದಿ ಕಲಿಕಾದಾರರು ಹಾಜರಾದರು. ಇವರಲ್ಲಿ 16 ಮಂದಿ ಕನ್ನಡ ಮಾಧ್ಯಮದವರು ಮತ್ತು 41 ಮಂದಿ ಮಲಯಾಳ ಮಾಧ್ಯಮದವರಾಗಿದ್ದಾರೆ. ಈ ಗುಂಪಿನಲ್ಲಿ 35 ಮಂದಿ ಮಹಿಳೆಯರು ಮತ್ತು 22 ಪುರುಷರಿದ್ದಾರೆ. ಇದರಲ್ಲಿ ಪರಿಶಿಷ್ಟ ಜಾತಿಯ 5 ಮಂದಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ಮೂವರು ಅಭ್ಯರ್ಥಿಗಳಿದ್ದಾರೆ. ನೀಲೇಶ್ವರದಲ್ಲಿ ಪರೀಕ್ಷೆ ಬರೆದ ವೈಕ್ಕತ್ ರಾಘವನ್ (80) ಅತ್ಯಂತ ಹಿರಿಯ ಹಾಗೂ ಬೋವಿಕಾನಂನಲ್ಲಿ ಪರೀಕ್ಷೆ ಬರೆದ ಪಿ. ಅಮಲ್ (18) ಅತ್ಯಂತ ಕಿರಿಯ ಅಭ್ಯರ್ಥಿಯಾಗಿದ್ದಾರೆ.
ಶಾಸಕ ಕಲ್ಲಟ್ರ ಮಾಹಿನ್ ಅವರು ಕಾಸರಗೋಡು ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯಲ್ಲಿರುವ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಕಲಿಕಾದಾರರೊಂದಿಗೆ ಸಂವಾದ ನಡೆಸಿದರು.
ಕಾಸರಗೋಡು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಾಬು ಅಬ್ರಹಾಂ ಅವರು ಕುಂಬಳ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯಲ್ಲಿರುವ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದರು. ಸಾಕ್ಷರತಾ ಮಿಷನ್ ಜಿಲ್ಲಾ ಸಂಯೋಜಕ ಸಿ. ಅಬ್ದುಲ್ ರಶೀದ್ ಮತ್ತು ವಿವಿಧ ಪ್ರೇರಕ್(ಸಂಯೋಜಕರು)ಗಳು ಪರೀಕ್ಷಾ ಮೇಲ್ವಿಚಾರಣೆ ನಡೆಸಿದರು.
ಮಲಯಾಳಂ, ಇಂಗ್ಲಿಷ್, ಹಿಂದಿ, ಸಮಾಜ ವಿಜ್ಞಾನ, ಮೂಲ ವಿಜ್ಞಾನ ಮತ್ತು ಗಣಿತ ವಿಷಯಗಳಲ್ಲಿ ಪರೀಕ್ಷೆ ನಡೆಯಿತು. ಈ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರಿಗೆ ಇದೇ ವರ್ಷ ಹತ್ತನೇ ತರಗತಿಯ ಸಮಾನತಾ ಪರೀಕ್ಷೆಗೆ ದಾಖಲಾಗಲು ಅವಕಾಶವಿರಲಿದೆ.



