ನವದೆಹಲಿ: ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಉಪಕ್ರಮವನ್ನು ಕೊಂಡಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಆಡಳಿತ, ನಾಗರಿಕರ ಸಬಲೀಕರಣ ಮತ್ತು ಜೀವನದ ಎಲ್ಲ ಅಂಶಗಳ ಮೇಲೆ ಪ್ರಭಾವ ಬೀರುವ ಮೂಲಕ ಎಲ್ಲ ವಲಯದ ಅಭಿವೃದ್ಧಿಗೆ ಹೊಸ ವ್ಯಾಖ್ಯಾನ ನೀಡಿದೆ ಎಂದಿದ್ದಾರೆ.
11 ವರ್ಷಗಳ ಡಿಜಿಟಲ್ ಇಂಡಿಯಾವು ಜಾಗತಿಕವಾಗಿ ಭಾರತಕ್ಕೆ ಹೊಸ ಗುರುತನ್ನು ತಂದು ಕೊಟ್ಟಿದೆ ಎಂದಿದ್ದಾರೆ.
'ಡಿಜಿಟಲ್ ಇಂಡಿಯಾ ಉಪಕ್ರಮ ಆರಂಭಿಸಿ 11 ವರ್ಷ ಕಳೆದಿದೆ. ಈ ಉಪಕ್ರಮವು ಆಡಳಿತ, ನಾಗರಿಕರ ಸಬಲೀಕರಣ ಮತ್ತು ಎಲ್ಲ ವಲಯದ ಬೆಳವಣಿಗೆಯ ವ್ಯಾಖ್ಯಾನನವನ್ನು ಬದಲಿಸಿದೆ' ಎಂದಿದ್ದಾರೆ.
ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ವಿಸ್ತರಣೆಯು ತಡೆರಹಿತ ಡಿಜಿಟಲ್ ಪಾವತಿ ಮತ್ತು ನೇರ ಹಣ ವರ್ಗಾವಣೆಯ ಮೂಲಕ ಪಾರದರ್ಶಕವಾಗಿ ಫಲಾನುಭವಿಗಳಿಗೆ ಲಾಭ ಪಡೆಯಲು ನೆರವಾಗಿದೆ. ಜೀವನವನ್ನು ಮತ್ತಷ್ಟು ಸುಲಭಗೊಳಿಸುವ ನಿಟ್ಟಿನಲ್ಲಿ ತಂತ್ರಜ್ಞಾನ ಒಂದು ಸಾಧನವಾಗಿದೆ ಎಂದಿದ್ಧಾರೆ.
ಡಿಜಿಟಲ್ ಇಂಡಿಯಾವು ನಾವೀನ್ಯದ ಅಲೆಯನ್ನು ವಿಶೇಷವಾಗಿ ಹಳ್ಳಿಗಳು, ಟಯರ್-2 ಮತ್ತು ಟಯರ್-3 ನಗರಗಳೂ ಸೇರಿದಂತೆ ದೇಶದ ಎಲ್ಲ ಭಾಗಗಳಿಗೂ ಕೊಂಡೊಯ್ದಿದೆ ಎಂದಿದ್ದಾರೆ.
ಜನ ಎದುರಿಸುತ್ತಿರುವ ಸಮಸ್ಯೆಗಳಿಗೆ ಯುವ ಉದ್ಯಮಿಗಳು, ಸ್ಟಾರ್ಟಪ್‌ಗಳು ಮತ್ತು ನಾವೀನ್ಯಕಾರರು ದೇಶದ ಪ್ರತಿಯೊಂದು ಭಾಗದಲ್ಲೂ ಪರಿಹಾರ ಕಂಡುಹಿಡಿಯುತ್ತಿದ್ದಾರೆ ಎಂದು ಹೇಳಿದ್ದಾರೆ.
ಈ ಉಪಕ್ರಮವು ಶಿಕ್ಷಣ, ಆರೋಗ್ಯ ವ್ಯವಸ್ಥೆ, ಕೃಷಿ, ವಾಣಿಜ್ಯ ಮತ್ತು ಸಾರ್ವಜನಿಕ ಸೇವೆಗಳ ಪೂರೈಕೆಯನ್ನು ಮತ್ತಷ್ಟು ಬಲಪಡಿಸಿದೆ. ಆಡಳಿತವನ್ನು ಮತ್ತಷ್ಟು ಪಾರದರ್ಶಕ, ದಕ್ಷ ಮತ್ತು ಸುಲಭ ಪ್ರವೇಶಕ್ಕೆ ಅನುವು ಮಾಡಿಕೊಟ್ಟಿದೆ ಎಂದಿದ್ಧಾರೆ.
ಡಿಜಿಟಲ್ ಜಗತ್ತಿನಲ್ಲಿ ಸರ್ಕಾರ ಕೈಗೊಂಡಿರುವ ಕ್ರಮಗಳು ದೇಶವು ಎಐ, ಸೆಮಿಕಂಡಕ್ಟರ್‌ಗಳು, ಕ್ವಾಂಟಮ್ ಕಂಪ್ಯೂಟಿಂಗ್ ಮತ್ತು ಇತರ ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ತ್ವರಿತ ಪ್ರಗತಿಯನ್ನು ಖಚಿತಪಡಿಸಿದೆ ಎಂದು ಮೋದಿ ಹೇಳಿದ್ದಾರೆ.
'ಬೆಳವಣಿಗೆ ಮತ್ತು ಅವಕಾಶದ ಹೊಸ ಮಾರ್ಗಗಳನ್ನು ಡಿಜಿಟಲ್ ಇಂಡಿಯಾ ಉಪಕ್ರಮವು ತೆರೆಯುತ್ತಿದೆ. ಮಾನವೀಯತೆ ಆಧರಿತ ತಂತ್ರಜ್ಞಾನ, ಪ್ರತಿಯೊಬ್ಬ ನಾಗರೀಕನ ಸಬಲೀಕರಣ ಮತ್ತು ಸುಸ್ಥಿರ ಅಭಿವೃದ್ಧಿಗೆ ಉತ್ತೇಜನವಿರುವ ಭವಿಷ್ಯ ರೂಪಿಸುವುದು ನಮ್ಮ ಗುರಿಯಾಗಿದೆ. ದೇಶದ ಅಭಿವೃದ್ಧಿ ಮತ್ತು ಸ್ವಾವಲಂಬನೆಗೆ ಡಿಜಿಟಲ್ ಇಂಡಿಯಾ ಬಲಿಷ್ಠ ಅಡಿಪಾಯ ಎಂದ ಮೋದಿ, ಕಳೆದ 11 ವರ್ಷಗಳಲ್ಲಿ ಜನರ ಬದುಕನ್ನು ಸರಳಗೊಳಿಸುವ ಮೂಲಕ ಬಡವರು ಮತ್ತು ಅವಕಾಶ ವಂಚಿತರ ಸಬಲೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿದೆ'ಎಂದಿದ್ದಾರೆ.
'ಡಿಜಿಟಲ್ ವಹಿವಾಟಿಗೆ ಆಪ್ಟಿಕಲ್ ಫೈವರ್ ನೆಟ್ವರ್ಕ್ ವಿಸ್ತರಣೆಯಿಂದ ಹಿಡಿದು ಡಿಜಿಟಲ್ ಇಂಡಿಯಾ ಉಪಕ್ರಮದ ಅಭೂತಪೂರ್ವ ಯಶಸ್ಸು ಇಡೀ ವಿಶ್ವನ್ನು ಭಾರತದತ್ತ ನೋಡುವಂತೆ ಮಾಡಿದೆ' ಎಂದಿದ್ದಾರೆ.
2015ರ ಮೊದಲು ಜನರು ಯಾವುದೇ ಸೇವೆಗಾಗಿ ಉದ್ದುದ್ದ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಇತ್ತು. ಇಂಟರ್‌ನೆಟ್‌ನ ಲಭ್ಯತೆ ಅತ್ಯಂತ ಕಡಿಮೆ ಪ್ರಮಾಣದಲ್ಲಿತ್ತು. ಇಂಟರ್ನೆಟ್ ಆಕ್ಸೆಸ್ ಹೆಚ್ಚಿಸುವುದರ ಜೊತೆಗೆ ಸರ್ಕಾರಿ ಸೇವೆಗಳನ್ನು ಆನ್‌ಲೈನ್‌ನಲ್ಲಿ ಒದಗಿಸುವ ಮೂಲಕ ಜನರ ಜೀವನ ಸರಳಗೊಳಿಸಲಾಗಿದೆ ಎಂದರು.
ಕಳೆದೊಂದು ದಶಕದಲ್ಲಿ ಡಿಜಿಟಲ್ ಇಂಡಿಯಾ ಉಪಕ್ರಮವು ಭಾರತದ ಡಿಜಿಟಲ್ ಆರ್ಥಿಕತೆ ಮತ್ತು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯಕ್ಕೆ ಅಡಿಪಾಯವಾಗಿತ್ತು. ಭಾರತವು ಈಗ ಜಾಗತಿಕ ನೈಜ ಸಮಯದ ಪಾವತಿ ವ್ಯವಸ್ಥೆಯಲ್ಲಿ ಮುಂಚೂಣಿಯಲ್ಲಿದೆ ಎಂದಿದ್ದಾರೆ.

