ನವದೆಹಲಿ: ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಖಮೇನಿ ಅವರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಇರಾನ್ ಆಹ್ವಾನ ನೀಡಿದೆ ಎಂದು 'ಹಿಂದೂಸ್ತಾನ್ ಟೈಮ್ಸ್' ವರದಿ ಮಾಡಿದೆ.
ಕಳೆದ ಫೆಬ್ರುವರಿ 28ರಂದು ಅಮೆರಿಕ-ಇಸ್ರೇಲ್ ಜಂಟಿ ವೈಮಾನಿಕ ದಾಳಿಯಲ್ಲಿ ಹತರಾಗಿದ್ದ ಖಮೇನಿ ಅವರ ಅಂತ್ಯಕ್ರಿಯೆಯ ವಿಧಿವಿಧಾನಗಳು ಮುಂದಿನ ವಾರ ನಡೆಯಲಿವೆ.
ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಪವಿತ್ರಾ ಮಾರ್ಗರಿಟಾ ಮತ್ತು ಬಿಹಾರದ ರಾಜ್ಯಪಾಲ, ಲೆಫ್ಟಿನೆಂಟ್ ಜನರಲ್ (ನಿವೃತ್ತ) ಸಯ್ಯದ್ ಅತಾ ಹಸನೈನ್ ಅವರು ಭಾರತವನ್ನು ಪ್ರತಿನಿಧಿಸಿ ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ.
ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರು ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಅಂತ್ಯಕ್ರಿಯೆಯ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದರು. ಈ ಸಂಬಂಧ ಸರ್ಕಾರದಿಂದ ಯಾವುದೇ ಅಧಿಕೃತ ಪ್ರಕಟಣೆ ಹೊರಬಂದಿಲ್ಲ. ಪ್ರಧಾನಿ ಮೋದಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಕಡಿಮೆಯಾಗಿದೆ.
ಅಂತ್ಯಕ್ರಿಯೆಯ ಕಾರ್ಯಕ್ರಮಕ್ಕಾಗಿ ಇರಾನ್ ದೇಶವು ಚೀನಾ, ರಷ್ಯಾ, ಪಾಕಿಸ್ತಾನ ಮತ್ತು ಕತಾರ್ ದೇಶಗಳ ನಾಯಕರಿಗೂ ಆಹ್ವಾನ ನೀಡಿದೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ತಮ್ಮ ದೇಶದ ಅಧಿಕೃತ ನಿಯೋಗವೊಂದು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಖಮೇನಿ ಅವರ ನಿಧನದ ನಂತರ ಅಂತ್ಯಕ್ರಿಯೆಯ ದಿನಾಂಕವನ್ನು ಹಲವು ಬಾರಿ ಬದಲಾಯಿಸಲಾಗಿತ್ತು. ಜುಲೈ 6, 7 ಮತ್ತು 9 ರಂದು ಕ್ರಮವಾಗಿ ಟೆಹರಾನ್, ಕೋಮ್ ಮತ್ತು ಮಶಾದ್‌ನಲ್ಲಿ ಅಂತ್ಯಕ್ರಿಯೆಯ ವಿಧಿವಿಧಾನಗಳು ನಡೆದ ನಂತರ, ಜುಲೈ 9ರಂದು ಇಮಾಮ್ ರೆಜಾ ಅವರ ದರ್ಗಾದಲ್ಲಿ ಅವರನ್ನು ದಫನ ಮಾಡಲಾಗುವುದು ಎಂದು ಇರಾನ್ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ.

