ಲಖನೌ: ಪೋಷಕರು ತಮ್ಮ ಮಕ್ಕಳ ಪ್ರೇಮ ಸಂಬಂಧವನ್ನು ಒಪ್ಪದಿದ್ದರೆ, ಅವರು (ಯುವಕ-ಯುವತಿ) ಓಡಿಹೋಗುತ್ತಾರೆ. ಕೆಲವು ಹುಡುಗಿಯರು ಗರ್ಭಿಣಿಯಾಗುತ್ತಾರೆ. ಅವರಿಗೆ ಹುಟ್ಟುವ ಮಕ್ಕಳ ಹೊಣೆಯನ್ನು ಸರ್ಕಾರ ಹೊರಬೇಕಾಗುತ್ತದೆ ಎಂದು ಉತ್ತರ ಪ್ರದೇಶ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಹೇಳಿಕೆ ನೀಡಿರುವುದು ವಿವಾದ ಸೃಷ್ಟಿಸಿದೆ.
ಎ.ಪಿ.ಜೆ. ಅಬ್ದುಲ್ ಕಲಾಂ ತಾಂತ್ರಿಕ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ಮಂಗಳವಾರ ಮಾತನಾಡಿರುವ ಅವರು, 'ಕೆಲವೊಮ್ಮೆ ಯುವಕ, ಯುವತಿಯರು ಓಡಿಹೋಗುತ್ತಾರೆ. ನಂತರ ಕೆಲ ಯುವತಿಯರು ಗರ್ಭಿಣಿಯರಾಗುತ್ತಾರೆ. ಆದರೆ, ಯಾರೊಬ್ಬರೂ ಮಗುವನ್ನು ಒಪ್ಪಿಸಿಕೊಳ್ಳುವುದಿಲ್ಲ. ಆಗ ಮಕ್ಕಳ ಹೊಣೆ ಯಾರದ್ದು? ಸರ್ಕಾರದ್ದು' ಎಂದು ಹೇಳಿದ್ದಾರೆ. ವಿದ್ಯಾರ್ಥಿಗಳನ್ನುದ್ದೇಶಿಸಿ, 'ನೀವು ಇದನ್ನೆಲ್ಲ ಮಾಡುತ್ತಿದ್ದೀರಿ. ಇಂತಹ ಚಟುವಟಿಕೆಯಲ್ಲಿ ತೊಡಗದಿರಿ' ಎಂದು ಕಿವಿ ಮಾತು ಹೇಳಿದ್ದಾರೆ.
ತಾವು ಪ್ರೇಮ ವಿವಾಹವನ್ನು ವಿರೋಧಿಸುವುದಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದ ರಾಜ್ಯಪಾಲೆ, 'ಸ್ವಾವಲಂಬಿಗಳಾಗುವವರೆಗೆ ಯುವತಿಯರು ಮದುವೆಯಾಗಬಾರದು' ಎಂದು ಸಲಹೆ ನೀಡಿದ್ದಾರೆ.
ಪಟೇಲ್ ಅವರು 'ಸಹಜೀವನ'ದ ಕುರಿತು ಈ ಹಿಂದೆ ನೀಡಿದ್ದ ಹೇಳಿಕೆಗಳೂ ವಿವಾದಕ್ಕೆ ಎಡೆಮಾಡಿಕೊಟ್ಟಿದ್ದವು.
2025ರಲ್ಲಿ ವಾರಾಣಸಿಯಲ್ಲಿ ನಡೆದ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ್ದ ಅವರು, 'ಸಹಜೀವನ ಸಂಬಂಧಗಳಿಂದ ದೂರವಿರಿ. ಜೀವನದ ಬಗ್ಗೆ ಎಚ್ಚರಿಕೆಯಿಂದ ನಿರ್ಧಾರಗಳನ್ನು ಕೈಗೊಳ್ಳಿ. ಯುವತಿಯರನ್ನು 50 - 50 ತುಂಡುಗಳಾಗಿ ಕತ್ತರಿಸಿದ ದೃಶ್ಯಗಳನ್ನು ನೀವು ನೋಡಿರುತ್ತೀರಿ' ಎಂದಿದ್ದರು.
ಅಂತಹದ್ದೇ ಮತ್ತೊಂದು ಕಾರ್ಯಕ್ರಮದಲ್ಲಿ, 'ನೀವು ಅನಾಥಾಶ್ರಮಗಳಿಗೆ ಭೇಟಿ ನೀಡಿದರೆ ಸಹಜೀವನ ಸಂಬಂಧಗಳ ಪರಿಣಾಮಗಳು ಕಾಣುತ್ತವೆ. 15 - 20 ವರ್ಷದ ಯುವತಿಯರು ಮಕ್ಕಳನ್ನು ಹೆತ್ತಿರುವುದನ್ನು ಅಲ್ಲಿ ನೋಡಬಹುದು' ಎಂದು ಹೇಳಿದ್ದರು.

