HEALTH TIPS

ತಪ್ಪು ಇಂಧನದ್ದಲ್ಲ, ನಿಮ್ಮದು: 'ಮೈಲೇಜ್' ಬಗ್ಗೆ ಕಾರು ಮಾಲೀಕರನ್ನೇ ದೂರಿದ ಗಡ್ಕರಿ

 ನವದೆಹಲಿ: ಶೇಕಡ 20ರಷ್ಟು ಎಥೆನಾಲ್ ಮಿಶ್ರಣವಿರುವ ಪೆಟ್ರೋಲ್‌ (ಇ20) ಬಳಕೆಯಿಂದಾಗಿ ವಾಹನದ ಇಂಧನ ದಕ್ಷತೆ (ಮೈಲೇಜ್) ಶೇಕಡ 3ರಿಂದ ಶೇ 5ರಷ್ಟು ಕಡಿಮೆ ಆಗಬಹುದು ಎಂಬ ವಿಚಾರ ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಮತ್ತು ಕಾರು ಚಾಲಕರ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. 


ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆ ಕುರಿತು ಪ್ರತಿಕ್ರಿಯಿಸಿದ ಗಡ್ಕರಿ, ಕಾರು ಮಾಲೀಕರು ತಮ್ಮ ವಾಹನದ ಇಂಧನ ದಕ್ಷತೆಯನ್ನು (ಮೈಲೇಜ್) ತಾವಾಗಿಯೇ ಲೆಕ್ಕಹಾಕಲು ಸಾಧ್ಯವಿಲ್ಲ. ಬದಲಾಗಿ, ಅಧಿಕೃತ ಡೀಲರ್‌ಗಳು ನಡೆಸುವ ಪರೀಕ್ಷೆಯನ್ನು ಅವಲಂಬಿಸಿರುತ್ತದೆ ಎಂದಿರುವುದು ಚರ್ಚೆಗೆ ಗ್ರಾಸವಾಗಿದೆ.

ಸೋಮವಾರ 'ಎಬಿಪಿ ನ್ಯೂಸ್' ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಪತ್ರಕರ್ತೆಯೊಬ್ಬರು, ಇ20 ಪೆಟ್ರೋಲ್‌ ಬಳಕೆಯಿಂದ ನಗರ ಮಿತಿಯಲ್ಲಿ ಚಲಿಸುವಾಗ ನನ್ನ ಕಾರಿನ ಮೈಲೇಜ್ ಕಡಿಮೆಯಾಗಿದೆ ಎಂದು ಹೇಳಿದರು.

'ನಮ್ಮ ಕಾರು ಇ20 ಪೆಟ್ರೋಲ್‌ಗೆ ಹೊಂದಿಕೊಳ್ಳುತ್ತದೆ ಎಂದು ಕಂಪನಿ ಹೇಳಿದ್ದರೂ, ಈ ಹಿಂದೆ ಸರಾಸರಿ 11 ಕಿ.ಮೀ ಮೈಲೇಜ್ ನೀಡುತ್ತಿದ್ದ ಕಾರು ಈಗ ಪ್ರತಿ ಲೀಟರ್‌ಗೆ 7 ಕಿ.ಮೀಗೆ ಕುಸಿದಿದೆ' ಎಂದು ಪತ್ರಕರ್ತೆ ಕೇಳಿದರು. ಈ ಕುರಿತು ಪ್ರತಿಕ್ರಿಯಸಿದ ಗಡ್ಕರಿ, ನೀವು ಈ ಅಂಕಿ-ಅಂಶವನ್ನು ಹೇಗೆ ಲೆಕ್ಕ ಹಾಕಿದ್ದೀರಿ ಎಂದು ಪ್ರಶ್ನಿಸಿದರು.

ಇದಕ್ಕೆ ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ತೋರಿಸುವ ಮೈಲೇಜ್ ಡಿಸ್‌ಪ್ಲೇ ಉಲ್ಲೇಖಿಸಿ ಪತ್ರಕರ್ತೆ ಉತ್ತರಿಸಿದರು.

ಇ20 (ಶೇ 20ರಷ್ಟು ಎಥೆನಾಲ್‌ ಮಿಶ್ರಣವಿರುವ ಪೆಟ್ರೋಲ್‌) ಯೋಜನೆಯನ್ನು ಮೊದಲಿನಿಂದಲೂ ಬೆಂಬಲಿಸುತ್ತಾ ಬಂದಿರುವ ಗಡ್ಕರಿ, ನಿಖರವಾದ ಇಂಧನ ದಕ್ಷತೆಯನ್ನು ವಾಹನ ತಯಾರಕರು ಅಧಿಕೃತಗೊಳಿಸಿದ ಪರೀಕ್ಷಾ ಉಪಕರಣಗಳ ಮೂಲಕ ಮಾತ್ರ ಅಳೆಯಲು ಸಾಧ್ಯ ಎಂದು ಹೇಳಿದರು.

'ನಾನಾಗಲಿ, ನೀವಾಗಲಿ ದಕ್ಷತೆಯನ್ನು ಅಳೆಯಲು ಸಾಧ್ಯವಿಲ್ಲ. ಕಾರಿನ ಮೈಲೇಜ್ ಅನ್ನು ಕಂಪನಿಯ ಅಧಿಕೃತ ಡೀಲರ್ ಬಳಿ ಇರುವ ಯಂತ್ರವನ್ನು ಬಳಸಿ ಮಾತ್ರ ಪರಿಶೀಲಿಸಬಹುದು' ಎಂದರು.

ಇ20 ಪೆಟ್ರೋಲ್ ಕೆಲವು ವಾಹನಗಳಲ್ಲಿ ಇಂಧನ ದಕ್ಷತೆಯನ್ನು ಶೇಕಡ 3ರಿಂದ 5ರಷ್ಟು ಕಡಿಮೆ ಮಾಡುತ್ತದೆ ಎಂದು ಕೇಂದ್ರ ಸರ್ಕಾರ ಒಪ್ಪಿಕೊಂಡ ಕೆಲವೇ ದಿನಗಳ ನಂತರ ಗಡ್ಕರಿ ಪ್ರತಿಕ್ರಿಯಿಸಿದ್ದಾರೆ. ಆದಾಗ್ಯೂ ಸರ್ಕಾರ ತನ್ನ ನೀತಿಯನ್ನು ಸಮರ್ಥಿಸಿಕೊಂಡಿದೆ.

ಕಳೆದ ವಾರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಎಥೆನಾಲ್ ಮಿಶ್ರಿತ ಪೆಟ್ರೋಲ್ ಕಾರ್ಯಕ್ರಮದ ಮೇಲಿನ ಟೀಕೆಗಳಿಗೆ ಉತ್ತರಿಸುವ ಉದ್ದೇಶದಿಂದ ಪ್ರಶ್ನೋತ್ತರ ದಾಖಲೆಯೊಂದನ್ನು ಬಿಡುಗಡೆ ಮಾಡಿತ್ತು.

'ಕೆಲವು ವಾಹನಗಳಲ್ಲಿ ಇಂಧನ ದಕ್ಷತೆಯು ಶೇಕಡ 3-5ರಷ್ಟು ಕಡಿಮೆಯಾಗಬಹುದು ಎಂದು ಒಪ್ಪಿಕೊಂಡಿದ್ದ ಸಚಿವಾಲಯವು, ಮೈಲೇಜ್ ಕೇವಲ ಒಂದು ಮಾನದಂಡ ಅಷ್ಟೆ' ಎಂದು ತಿಳಿಸಿತ್ತು.

ಎಥೆನಾಲ್ ಮಿಶ್ರಣವನ್ನು ಹೆಚ್ಚಿಸುವ ಮೂಲಕ ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ಮೇಲಿನ ಅವಲಂಬನೆ ತಗ್ಗಿಸಲು ಮತ್ತು ಇಂಧನ ಹೊರಸೂಸುವಿಕೆಯನ್ನು ಕಡಿತಗೊಳಿಸುವ ಪ್ರಯತ್ನದ ಭಾಗವಾಗಿ ಏಪ್ರಿಲ್ 1ರಿಂದ ದೇಶದಾದ್ಯಂತ ಇ20 ಪೆಟ್ರೋಲ್‌ನ ಕಡ್ಡಾಯ ಮಾರಾಟ ಜಾರಿಗೆ ಬಂದಿದೆ.

ಆದಾಗ್ಯೂ, ಕೇಂದ್ರದ ಈ ನಿರ್ಧಾರಕ್ಕೆ ವಾಹನ ಸವಾರರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ವಾಹನ ಉದ್ಯಮದ ಕೆಲವು ವಲಯಗಳಲ್ಲಿ ಕಳವಳ ಮೂಡಿಸಿದೆ. ಕಾರು ಮಾಲೀಕರು ಮೈಲೇಜ್ ಕುಸಿತದ ಬಗ್ಗೆ ಆತಂಕ ವ್ಯಕ್ತಪಡಿಸಿದರೆ, ವಾಹನ ತಯಾರಕರು ಹಳೆಯ ವಾಹನಗಳಲ್ಲಿ ಮಿಶ್ರಿತ ಇಂಧನದ ಕಾರ್ಯಕ್ಷಮತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.

ಮೈಲೇಜ್ ಲೆಕ್ಕಹಾಕಲು ಸಾಧ್ಯವೇ?

ಕಾರು ಮಾಲೀಕರು ಮತ್ತು ಚಾಲಕರು ಇಂಧನ ದಕ್ಷತೆಯ ಬಗ್ಗೆ ಒಂದು ಅಂದಾಜನ್ನು ಪಡೆಯಬಹುದೇ ಹೊರತು, ನಿಖರವಾಗಿ ವಿವರಿಸಲು ಸಾಧ್ಯವಿಲ್ಲ.

ಆಧುನಿಕ ಕಾರುಗಳಲ್ಲಿ ಹಾಕಿಸಲಾದ ಇಂಧನ, ಕ್ರಮಿಸಿದ ದೂರ ಮತ್ತು ಎಲೆಕ್ಟ್ರಾನಿಕ್‌ ಕಂಟ್ರೋಲ್‌ ಯೂನಿಟ್‌ನ (ಇಸಿಯು) ಮಾಹಿತಿಯನ್ನು ಬಳಸಿಕೊಂಡು ಇಂಧನ ದಕ್ಷತೆಯನ್ನು ಲೆಕ್ಕಹಾಕಬಹುದು. ಡ್ಯಾಶ್‌ಬೋರ್ಡ್ ರೀಡಿಂಗ್‌ಗಳು ಕೇವಲ ಅಂದಾಜಾಗಿದ್ದರೂ, ವಾಹನವನ್ನು ಅವಲಂಬಿಸಿ ಇಡೀ ಟ್ಯಾಂಕ್ ಇಂಧನದ ಮೇಲೆ ಮಾಡುವ ಹಸ್ತಚಾಲಿತ ಲೆಕ್ಕಾಚಾರದಿಂದ ಶೇಕಡ 2ರಿಂದ 5ರಷ್ಟು ನಿಖರತೆ ಇರುತ್ತದೆ.

ಹಲವು ತಜ್ಞರು 'ಫುಲ್-ಟ್ಯಾಂಕ್' ವಿಧಾನವು ಇಂಧನ ದಕ್ಷತೆಯನ್ನು ಪರೀಕ್ಷಿಸಲು ಅತ್ಯಂತ ನಿಖರವಾದ ಮಾರ್ಗವೆಂದು ಪರಿಗಣಿಸುತ್ತಾರೆ. ಚಾಲಕರು ಟ್ಯಾಂಕ್ ಅನ್ನು ಪೂರ್ಣವಾಗಿ ತುಂಬಿಸಿ, ಟ್ರಿಪ್ ಮೀಟರ್ ಅನ್ನು ರೀಸೆಟ್ ಮಾಡುತ್ತಾರೆ. ನಂತರ ಮುಂದಿನ ಬಾರಿ ಇಂಧನ ತುಂಬಿಸುವವರೆಗೆ ಮಾಮೂಲಿಯಾಗಿ ವಾಹನ ಚಲಾಯಿಸಿ, ತದನಂತರ ಕ್ರಮಿಸಿದ ದೂರವನ್ನು ಆಧರಿಸಿ ಇಂಧನದ ದಕ್ಷತೆಯನ್ನು ತಿಳಿಯುತ್ತಾರೆ.

ಡೀಲರ್ ಯಂತ್ರ ಹೇಗೆ ಕೆಲಸ ಮಾಡುತ್ತದೆ?

ತಯಾರಕರ ಪರೀಕ್ಷಾ ಉಪಕರಣವು ಕೇವಲ ಇಂಧನ ದಕ್ಷತೆಯನ್ನು ಪ್ರದರ್ಶಿಸುವುದಲ್ಲದೆ, ಎಲೆಕ್ಟ್ರಾನಿಕ್‌ ಕಂಟ್ರೋಲ್‌ ಯೂನಿಟ್‌ (ಇಸಿಯು) ವಿವರವಾದ ಡೇಟಾವನ್ನು ಒದಗಿಸುತ್ತದೆ. ಇಂಧನ ಇಂಜೆಕ್ಟರ್‌, ಆಕ್ಸಿಜನ್ ಸೆನ್ಸಾರ್‌ ಮತ್ತು ಏರ್‌ಫ್ಲೋ ಸೆನ್ಸಾರ್‌ಗಳಂತಹ ಘಟಕಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ಪರಿಶೀಲಿಸುತ್ತದೆ. ಇದು ಎಂಜಿನ್ ದೋಷಗಳನ್ನೂ ಪತ್ತೆಹಚ್ಚುತ್ತದೆ.

ಆದಾಗ್ಯೂ, ಸಂಚಾರ ದಟ್ಟಣೆ, ನಗರ ಮತ್ತು ಹೆದ್ದಾರಿ ಚಾಲನೆ, ಹವಾನಿಯಂತ್ರಣ (ಎಸಿ) ಬಳಕೆ, ಟೈರ್ ಒತ್ತಡ, ಚಾಲನಾ ಶೈಲಿ ಮತ್ತು ವಾಹನದ ತೂಕದಿಂದಲೂ ಇಂಧನ ದಕ್ಷತೆಯ ಮೇಲೆ ಪ್ರಭಾವ ಬೀರುತ್ತದೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries