ಕಾಸರಗೋಡು: ರಾಜ್ಯ ವಿದ್ಯುತ್ ಮತ್ತು ಪರಿಸರ ಖಾತೆ ಸಚಿವ ಸನ್ನಿ ಜೋಸೆಫ್ ಅವರು ಕಾಸರಗೋಡು ಜಿಲ್ಲೆಯಲ್ಲಿನ ಬ್ಯಾಟರಿ ಶಕ್ತಿ ಸಂಗ್ರಹಣಾ ವ್ಯವಸ್ಥೆ (ಬಿಇಎಸ್‍ಎಸ್) ಯೋಜನಾ ಪ್ರದೇಶಗಳಿಗೆ ಭೇಟಿ ನೀಡಿ ಅವಲೋಕನ ನಡೆಸಿದರು.
ನಂತರ ಮೈಲಾಟಿಯಲ್ಲಿ ನಡೆದ ಅವಲೋಕನಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಜಾರಿಯಲ್ಲಿರುವ ಯೋಜನೆಗಳನ್ನು ಅಕ್ಟೋಬರ್ ವೇಳೆಗೆ ಕಾರ್ಯಾರಂಭಗೊಳಿಸಲಾಗುವುದು. ಕಾಸರಗೋಡು ಜಿಲ್ಲೆಯ ವಿದ್ಯುತ್ ವಿತರಣಾ ಜಾಲವನ್ನು ಹೆಚ್ಚು ದಕ್ಷ ಮತ್ತು ವಿಶ್ವಾಸಾರ್ಹವಾಗಿಸುವ ನಿಟ್ಟಿನಲ್ಲಿ ಕೆಎಸ್‍ಇಬಿಎಲ್ (ಕೇರಳ ರಾಜ್ಯ ವಿದ್ಯುತ್ ಮಂಡಳಿ) ಅನುಷ್ಠಾನಗೊಳಿಸುತ್ತಿರುವ ಈ ಪ್ರಮುಖ ಬಿಇಎಸ್‍ಎಸ್ ಯೋಜನೆಗಳ ಪ್ರಗತಿ ಪರಿಶೀಲನೆ ನಿಟ್ಟಿನಲ್ಲಿ ಸಚಿವರ ಭೇಟಿ ಆಯೋಜಿಸಲಾಗಿತ್ತು.
ಜಿಲ್ಲೆಯನ್ನು ಸುರಕ್ಷಿತ ಮತ್ತು ಆಧುನಿಕ ನವೀಕರಿಸಬಹುದಾದ ಇಂಧನ ಆಧಾರಿತ ವ್ಯವಸ್ಥೆಯೆಡೆಗೆ ಕೊಂಡೊಯ್ಯುವ ಯೋಜನೆಗಳನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸಲಾಗುವುದು. ಹಗಲಿನಲ್ಲಿ ಹೆಚ್ಚುವರಿ ಸೌರಶಕ್ತಿಯನ್ನು ಸಂಗ್ರಹಿಸುವ ಮೂಲಕ, ಬಿಇಎಸ್‍ಎಸ್ ತಂತ್ರಜ್ಞಾನವು ಸಂಜೆಯ ಸಮಯ ಮತ್ತು ವಿದ್ಯುತ್ ಬಳಕೆಯ ಗರಿಷ್ಠ ಅವಧಿಗಳಲ್ಲಿನ ಹೆಚ್ಚಿನ ಬೇಡಿಕೆಯನ್ನು ನಿಭಾಯಿಸಲು ಸಹಕಾರಿಯಾಗಲಿದೆ. ಇದರಿಂದ ವೋಲ್ಟೇಜ್ ಏರಿಳಿತಗಳು ಮತ್ತು ವಿದ್ಯುತ್ ಕೊರತೆಯ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುವುದಲ್ಲದೆ, ಹೊರಗಿನ ಮೂಲಗಳಿಂದ ಹೆಚ್ಚಿನ ದರದಲ್ಲಿ ವಿದ್ಯುತ್ ಖರೀದಿಸುವ ಪರಿಸ್ಥಿತಿಗೆ ಕಡಿವಾಣ ಹಾಕಿ ಕೆಎಸ್‍ಬಿಎಲ್ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲಿರುವುದಾಗಿ ತಿಳಿಸಿದರು.
12 ವರ್ಷಗಳ ಕಾರ್ಯಾಚರಣಾ ಅವಧಿಯನ್ನು ಹೊಂದಿರುವ ಈ ಯೋಜನೆಗಳು, ಕಾಸರಗೋಡಿನ ಭವಿಷ್ಯದ ಇಂಧನ ಅಗತ್ಯಗಳನ್ನು ಪೂರೈಸಲು ರಚಿಸಲಾದ ದೀರ್ಘಕಾಲೀನ ಹೂಡಿಕೆಯಾಗಿದೆ. ಇವು ಕೈಗಾರಿಕೆ, ಮಾಹಿತಿ ತಂತ್ರಜ್ಞಾನ, ಪ್ರವಾಸೋದ್ಯಮ ಮತ್ತು ಕೃಷಿಯಂತಹ ಕ್ಷೇತ್ರಗಳ ಬೆಳವಣಿಗೆಗೆ ಉತ್ತೇಜನ ನೀಡುವುದರ ಜತೆಗೆ ಎಲೆಕ್ಟ್ರಿಕ್ ವಾಹನ ಚಾಜಿರ್ಂಗ್ ಜಾಲದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದುತಿಳಿಸಿದರು.
ಉದುಮ ಶಾಸಕ ಕೆ. ನೀಲಕಂಠನ್, ಕೇರಳ ರಾಜ್ಯ ವಿದ್ಯುತ್ ಮಂಡಳಿಯ ನಿರ್ದೇಶಕ ಎಂ.ಪಿ. ರಾಜನ್, ಪ್ರಸರಣ ವಿಭಾಗದ ಮುಖ್ಯ ಎಂಜಿನಿಯರ್ ಶಾಜಿ ಸುಧಾಕರನ್, ಆರ್‍ಇಎಸ್ ಉಪ ಮುಖ್ಯ ಎಂಜಿನಿಯರ್ ಆಶಾ ಮಾರ್ಟಿನ್, ಕಾಸರಗೋಡು ಕಾರ್ಯನಿರ್ವಾಹಕ ಎಂಜಿನಿಯರ್ ಶಿವದಾಸನ್ ಇ.ಎಸ್ ಹಾಗೂ ಜೆಎಸ್‍ಡಬ್ಲ್ಯೂ ಪ್ರತಿನಿಧಿಗಳು ಭಾಗವಹಿಸಿದ್ದರು.



