ಕಾಸರಗೋಡು: ಉಕ್ರೇನ್‍ನಲ್ಲಿ ಮೃತಪಟ್ಟ ಮಚೆರ್ಂಟ್ ನೇವಿ ಉದ್ಯೋಗಿ ಅಖಿಲ್ ಜೋಯಲ್ ಅವರ ಮೃತದೇಹವನ್ನು ಊರಿಗೆ ತರಳೂ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ತಿಳಿಸಿದ್ದಾರೆ.
ಅವರು ಉಕ್ರೇನ್ ಕರಾವಳಿಯ ಸಮೀಪ ಸರಕು ಸಾಗಣೆ ಹಡಗಿನ ಮೇಲಿನ ದಾಳಿಯಲ್ಲಿ ಮೃತಪಟ್ಟ, ವೆಳ್ಳರಿಕುಂಡು ಮೂಲದ ಮಚೆರ್ಂಟ್ ನೇವಿ ಉದ್ಯೋಗಿ ಅಖಿಲ್ ಜೋಯಲ್ ಅವರ ವೆಲ್ಲರಿಕುಂಡಿನ ಎಕೆಜಿ ನಗರದಲ್ಲಿರುವ ಮನೆಗೆ ಭೇಟಿ ನೀಡಿ ಅವರ ಪೋಷಕರಿಗೆ ಸಾಂತ್ವನ ಹೇಳಿದ ನಂತರ ಸುದ್ದಿಗಾರರ ಜತೆ ಮಾತನಾಡಿದರು.
ಅಖಿಲ್ ಹೆತ್ತವರಾದ ಜೋಯಲ್ ಮತ್ತು ಸ್ಯಾಲಿ ಹಾಗೂ ಇತರ ಸಂಬಂಧಿಕರನ್ನು ಮುಖತ: ಭೇಟಿಮಾಡಿದ ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಅವರು, ಅಖಿಲ್ ಸಾವನ್ನು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಖಚಿತಪಡಿಸಿದೆ.
ಮೃತದೇಹವನ್ನು ತಾಯ್ನಾಡಿಗೆ ತರಲು ರಾಜ್ಯ ಸರ್ಕಾರ ಮತ್ತು 'ನೋರ್ಕಾ' ಅಗತ್ಯವಿರುವ ಎಲ್ಲಾ ಕ್ರಮ ಕೈಗೊಳ್ಳುತ್ತಿವೆ. ಭಾರತೀಯ ರಾಯಭಾರ ಕಚೇರಿಯೊಂದಿಗೆ ಲಭ್ಯವಾಗುವ ಸಂಬಂಧಿತ ಮಾಹಿತಿಯನ್ನು ತಕ್ಷಣವೇ ಅವರ ಸಂಬಂಧಿಕರಿಗೆ ತಿಳಿಸಲಾಗುವುದು ಎಂದು ತಿಳಿಸಿದರು.
ಅಖಿಲ್ ಅವರ ಪಾರ್ಥಿವ ಶರೀರವನ್ನು ವಿಮಾನದ ಮೂಲಕ ತವರಿಗೆ ತಲುಪಿಸಲು ಸರ್ಕಾರವು ಅಗತ್ಯವಿರುವ ಎಲ್ಲಾ ಕ್ರಮ ಕೈಗೊಳ್ಳುತ್ತಿದೆ. ಮೃತದೇಹದ ಪಂಚನಾಮೆ ಸೇರಿದಂತೆ ವಿವಿಧ ಪ್ರಕ್ರಿಯೆ ಪೂರ್ತಿಗೊಳ್ಳಲು ಎರಡು ವಾರ ತಗಲುವ ಸಾಧ್ಯತೆಯಿದ್ದು, ಇದಕ್ಕೂ ಮುಂಚಿತವಾಗಿ ಪ್ರಕ್ರಿಯೆ ಪೂರ್ತಿಗೊಳಿಸಲು ಸರ್ಕಾರದ ಕಡೆಯಿಂದ ಆಗ್ರಹಿಸಲಾಗುವುದು. ಜತೆಗೆ ಅಖಿಲ್ ಕುಟುಂಬಕ್ಕೆ ಲಭಿಸಬೇಕಾದ ಸೌಲಭ್ಯಗಳು ದೊರೆಯುವಂತೆ ಮಾಡಲು ರಾಜ್ಯ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಸರ್ಕಾರದೊಂದಿಗೆ ಸಂಪೂರ್ಣ ಸಹಕಾರ ಖಚಿತಪಡಿಸಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ವೆಲ್ಲರಿಕುಂಡು ತಹಸೀಲ್ದಾರ್ ಕೆ.ಬಿ. ರಾಮು ಮತ್ತು ಇತರ ಕಂದಾಯ ಅಧಿಕಾರಿಗಳು ಜಿಲ್ಲಾಧಿಕಾರಿ ಜತಗಿದ್ದರು.



