ನವದೆಹಲಿ: ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಭಾರತ ಪ್ರವಾಸದಲ್ಲಿರುವ ಜಾಂಜೀಬಾರ್ ಅಧ್ಯಕ್ಷ ಹುಸೇನ್ ಅಲಿ ಮ್ವಿನ್‌ಯಿ ಅವರನ್ನು ಭಾನುವಾರ ಭೇಟಿಯಾಗಿ ದ್ವಿಪಕ್ಷೀಯ ಸಹಯೋಗ ವಿಸ್ತರಣೆ ಕುರಿತು ಚರ್ಚಿಸಿದರು.
'ಉನ್ನತ ಶಿಕ್ಷಣ, ಸಾಮರ್ಥ್ಯ ವೃದ್ಧಿ, ನೀರು ಸರಬರಾಜು, ಆರೋಗ್ಯ, ಕೃತಕ ಬುದ್ಧಿಮತ್ತೆ ಮತ್ತು ಡಿಜಿಟಲ್ ಕ್ಷೇತ್ರದಲ್ಲಿ ಸಹಯೋಗ ವೃದ್ಧಿಗೆ ಚರ್ಚಿಸಲಾಯಿತು' ಎಂದು ಜೈಶಂಕರ್ ಅವರು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.
ತಾಂಜಾನಿಯಾದ ಅರೆ ಸ್ವಾಯತ್ತ ಪ್ರಾಂತ್ಯವಾದ ಜಾಂಜಿಬಾರ್ ಜೊತೆ ಭಾರತವು ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ನಿಕಟ ಬಾಂಧವ್ಯ ಹೊಂದಿದೆ. ಮದ್ರಾಸ್ ಐಐಟಿಯ ಕ್ಯಾಂಪಸ್ ಅನ್ನು 2023ರಲ್ಲಿ ಇಲ್ಲಿ ತೆರೆಯಲಾಗಿತ್ತು.
ಪ್ರತ್ಯೇಕ ಸಭೆ: ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಮ್ವಿನ್‌ಯಿ ಅವರೊಂದಿಗೆ ಪ್ರತ್ಯೇಕ ಸಭೆ ನಡೆಸಿದರು.
'ಈ ಸಭೆಯು ಜಾಂಜಿಬಾರ್‌ನೊಂದಿಗೆ ಭಾರತವು ಹೊಂದಿರುವ ವಿಶೇಷ ಬಾಂಧವ್ಯವನ್ನು ಒತ್ತಿ ಹೇಳಿತು. ವ್ಯಾಪಾರ, ಹೂಡಿಕೆ, ಅಭಿವೃದ್ಧಿ ಪಾಲುದಾರಿಕೆ, ಪ್ರವಾಸೋದ್ಯಮ, ಸಾಗರ ಸಂಬಂಧಿ ಆರ್ಥಿಕತೆ, ಶಿಕ್ಷಣ, ತಂತ್ರಜ್ಞಾನ ಮತ್ತು ಬಹುಪಕ್ಷೀಯ ಸಹಭಾಗಿತ್ವದ ಕುರಿತು ಉಭಯ ನಾಯಕರು ಮಾತುಕತೆ ನಡೆಸಿದರು' ಎಂದು ಉಪ ರಾಷ್ಟ್ರಪತಿ ಕಚೇರಿ ಮಾಹಿತಿ ನೀಡಿದೆ.

