ನವದೆಹಲಿ (PTI): ಪ್ರತಿಭಟನೆ ನಡೆಸುತ್ತಿರುವ ಜಾಗದಿಂದ ಸ್ಥಳಾಂತರಿ ಸುವ ಮೂಲಕ ನನ್ನ ಸಾಂವಿಧಾನಿಕ ಹಕ್ಕುಗಳಿಗೆ ಧಕ್ಕೆ ತರಬಾರದು ಎಂದು ಉಪವಾಸ ನಿರತ ಸೊನಮ್ ವಾಂಗ್ಚೂಕ್ ಶುಕ್ರವಾರ ಹೇಳಿದ್ದಾರೆ.
ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಪ್ರತಿಭಟನೆಯನ್ನು ಬೆಂಬಲಿಸಿ ತಾವು ಆರಂಭಿಸಿರುವ ಅನಿರ್ದಿಷ್ಟಾವಧಿ ಉಪವಾಸದ 13ನೇ ದಿನವಾದ ಶುಕ್ರವಾರ ಮಾತನಾಡಿದ ಅವರು, 'ಕೊಬ್ಬಿನ ಜೊತೆಗೆ ಮಾಂಸಖಂಡಗಳೂ ಕುಗ್ಗಿವೆ.
ಎಲುಬುಗಳು ಎದ್ದು ಕಾಣುತ್ತಿವೆ. ಆದರೂ ಉತ್ಸಾಹ ಕುಂದಿಲ್ಲ' ಎಂದು ಹೇಳಿದರು.
'ನನ್ನ ಆರೋಗ್ಯ ಸ್ಥಿರವಾಗಿದೆ. ಆರಂಭಿಕ ದಿನಗಳು ಕಷ್ಟವಾಗಿದ್ದವು, ದಿನ ಕಳೆದಂತೆ ದೇಹ ಒಗ್ಗಿಕೊಂಡಿತು. ಸ್ವಲ್ಪ ಸುಸ್ತು ಹೊರತಾಗಿ ಉಳಿದಂತೆ ಚೆನ್ನಾಗಿಯೇ ಇದ್ದೇನೆ' ಎಂದು ಅವರು ತಿಳಿಸಿದರು.
'ನಾನು ಸ್ವಯಂಪ್ರೇರಿತನಾಗಿ ಹೋರಾಟಕ್ಕೆ ಕುಳಿತಿದ್ದೇನೆ, ನನ್ನ ಪ್ರಾಣಕ್ಕೆ ಯಾರಿಂದಲೂ ಬೆದರಿಕೆ ಇಲ್ಲ. ಹೀಗಾಗಿ ನನ್ನನ್ನು ಸ್ಥಳಾಂತರಿಸುವ ಅಗತ್ಯವಾದರೂ ಏನಿದೆ' ಎಂದು ಅವರು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
'ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆಗಾಗಿ ಒತ್ತಾಯಿಸಿ ವಿದ್ಯಾರ್ಥಿಗಳ ಪರವಾಗಿ ನಾನು ಇಲ್ಲಿದ್ದೇನೆ. ಲಡಾಖ್ ವಿಚಾರವಾಗಿಯೂ ಮಾತುಕತೆ ಪ್ರಗತಿ ಕಂಡಿದ್ದು, ಅದನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯಬೇಕಿದೆ. ಅದಕ್ಕಾಗಿ ಮುಂಗಾರು ಅಧಿವೇಶನ ಒಳ್ಳೆಯ ಸಮಯ' ಎಂದು ವಿವರಿಸಿದರು.
'ಕೇಂದ್ರ ಸರ್ಕಾರದ ವಿರುದ್ಧ ಯುವಜನರಿಗೆ ತೀವ್ರ ಆಕ್ರೋಶವಿದೆ. ಮುಂಗಾರು ಅಧಿವೇಶನ ಆರಂಭಕ್ಕೂ ಮುನ್ನ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಪಡೆದರೆ ಸರ್ಕಾರವು ಮತ್ತೆ ಯುವಜನರಲ್ಲಿ ಜನಪ್ರಿಯತೆ ಗಳಿಸಬಹುದು. ರಾಜಕೀಯ ಲಾಭದ ದೃಷ್ಟಿಯಿಂದಲೂ ಅವರಿಗೆ ಇದು ಅನಿವಾರ್ಯ. ತಪ್ಪಿದಲ್ಲಿ, ನಾವು ಏನು ಮಾಡಬೇಕೋ ಅದನ್ನು ಮಾಡುತ್ತೇವೆ' ಎಂದು ಅವರು ಕೇಂದ್ರ ಸರ್ಕಾರವನ್ನು ಎಚ್ಚರಿಸಿದರು.

