ನವದೆಹಲಿ: ಮೊಸರು ತಯಾರಿಕೆಯಲ್ಲಿ ವಿಶ್ವದ ಅತಿದೊಡ್ಡ ಘಟಕಕ್ಕೆ ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರು ಕೋಲ್ಕತ್ತದಲ್ಲಿ ಭಾನುವಾರ ಭೂಮಿ ಪೂಜೆ ನೆರವೇರಿಸಲಿದ್ದಾರೆ.
'ಅಮೂಲ್ ಬಂಗಾಳ ಹೈನುಗಾರಿಕೆ ಯೋಜನೆ' ಅಡಿಯಲ್ಲಿ ಈ ಘಟಕವನ್ನು ನಿರ್ಮಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ, ಸಹಕಾರ ಕ್ಷೇತ್ರದ ಪ್ರಮುಖರು ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ಘಟಕಕ್ಕಾಗಿ ಅಮೂಲ್ ₹700 ಕೋಟಿ ಹೂಡಿಕೆ ಮಾಡುತ್ತಿದೆ ಎಂದು ಸಹಕಾರ ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.
ಈ ಘಟಕವು ಪ್ರತಿದಿನ 30 ಲಕ್ಷ ಲೀಟರ್ ಹಾಲನ್ನು ಸಂಸ್ಕರಿಸಿ, ಅಂದಾಜು 10 ಲಕ್ಷ ಕೆ.ಜಿ. ಮೊಸರನ್ನು ತಯಾರಿಸುವ ಸಾಮರ್ಥ್ಯ ಹೊಂದಿರಲಿದೆ.
ಈ ಘಟಕವು ನಿತ್ಯ 10 ಲಕ್ಷ ಲೀಟರ್ ಹಾಲು ಪ್ಯಾಕ್ ಮಾಡುವ, 1 ಲಕ್ಷ ಲೀಟರ್ ಐಸ್ಕ್ರೀಂ ಉತ್ಪಾದಿಸುವ, 20 ಟನ್ ಪನೀರ್, 10 ಟನ್ ತುಪ್ಪ, 10 ಟನ್ ಸಿಹಿ ತಿನಿಸುವ ಉತ್ಪಾದಿಸುವ ಸಾಮರ್ಥ್ಯವನ್ನು ಕೂಡ ಹೊಂದಿರಲಿದೆ.

