ಲಖನೌ: ಅಯೋಧ್ಯೆ ರಾಮ ಮಂದಿರ ಟ್ರಸ್ಟ್‌ನ ಆಡಳಿತಾತ್ಮಕ ಮತ್ತು ಹಣಕಾಸು ವ್ಯವಹಾರ ನೋಡಿಕೊಳ್ಳಲು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ನೇಮಕ ಪ್ರಕ್ರಿಯೆಗೆ ಅಯೋಧ್ಯೆ ಮೂಲದ ಹಲವು ಪ್ರಮುಖ ಸ್ವಾಮೀಜಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.
ಸಇಇಒ ಹುದ್ದೆಗೆ ಕೆಲ ದಿನಗಳ ಹಿಂದಷ್ಟೇ ರಾಮ ಮಂದಿರ ಟ್ರಸ್ಟ್ ಅರ್ಜಿಗಳನ್ನು ಆಹ್ವಾನಿಸಿದ್ದು, ಈ ಕುರಿತಂತೆ ಪ್ರತಿಕ್ರಿಯಿಸಿರುವ ಸ್ವಾಮೀಜಿಗಳು, ದೇವಾಲಯವನ್ನು ಧರ್ಮಾಚಾರ್ಯರು ನಿರ್ವಹಿಸಬೇಕೇ ಹೊರತು ಆಡಳಿತಗಾರರಲ್ಲ ಎಂದಿದ್ದಾರೆ.
ವರದಿಗಳ ಪ್ರಕಾರ, ಈಗಾಗಲೇ ಟ್ರಸ್ಟ್‌ಗೆ 1,000ಕ್ಕೂ ಅಧಿಕ ಅರ್ಜಿಗಳು ಬಂದಿವೆ. ಅರ್ಜಿ ಸಲ್ಲಿಕೆಗೆ ಜುಲೈ 18 ಕೊನೆಯ ದಿನವಾಗಿದ್ದು, ಆ ಹೊತ್ತಿಗೆ ಅರ್ಜಿಗಳ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ.
'ನಮಗೆ ಸಿಇಒ ಬೇಡ.. ದೈವ ಸೇವಕ ಬೇಕು. ರಾಮನಂದಿ ಪಂಥ, ಒಬ್ಬ ಸನ್ಯಾಸಿ ಅಥವಾ ನಮ್ಮ ಧರ್ಮದ ಬಗ್ಗೆ ತಿಳಿದಿರುವ ವ್ಯಕ್ತಿ ಬೇಕು' ಎಂದು ಜಗದ್ಗುರು ಸತೀಶಾಚಾರ್ಯ ಹೇಳಿದ್ದಾರೆ.
ಇದಕ್ಕೆ ದನಿಗೂಡಿಸಿರುವ ಮತ್ತೊಬ್ಬ ಪ್ರಮುಖ ಸ್ವಾಮೀಜಿ, ಮಹಾಂತ ಧರ್ಮ ದಾಸ್, ಭಗವಂತ ರಾಮನ ಉಪಸ್ಥಿತಿ ಇರುವ ದೇಗುಲಕ್ಕೆ ಸಿಇಒ ಅಗತ್ಯವಿಲ್ಲ ಎಂದಿದ್ದಾರೆ.
ರಾಮ ಮಂದಿರಕ್ಕೆ ಪ್ರದಾನ ರಾಮ ಸೇವಕನ ಅಗತ್ಯವಿದೆಯೇ ಹೊರತು ಸಿಇಒ ಅಲ್ಲ ಎಂದು ಕರ್ಪತ್ರಿಜಿ ಮಹಾರಾಜ್ ಹೇಳಿದ್ದಾರೆ. ರಾಮನಂದಿ ಪಂಥದ ಧರ್ಮಾಚಾರ್ಯರು ಮಾತ್ರ ರಾಮ ಮಂದಿರದ ವ್ಯವಹಾರ ನೋಡಿಕೊಳ್ಳಬೇಕು ಎಂದಿದ್ಧಾರೆ. ಸದ್ಯ ಇರುವ ಟ್ರಸ್ಟ್ ವಿಸರ್ಜಿಸಿ ಮರು ಸಂಯೋಜನೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ರಾಮ ಮಂದಿರ ಯಾವುದೇ ಒಬ್ಬ ವ್ಯಕ್ತಿ ಅಥವಾ ಸಂಘಟನೆಗೆ ಸೇರಿದ್ದಲ್ಲ. ದೇಣಿಗೆ ದುರುಪಯೋಗ ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು ಎಂದು ಮಹಾಂತ ರಾಜು ದಾಸ್ ಹೇಳಿದ್ದಾರೆ.
ಸಿಇಒ ನೇಮಕ ಪ್ರಕ್ರಿಯೆಗೆ ರಾಮ ಮಂದಿರ ಟ್ರಸ್ಟ್ ಮೂರು ಸದಸ್ಯರ ಸಮಿತಿಯನ್ನು ರಚನೆ ಮಾಡಿದೆ. ಈ ಸಮಿತಿಯಲ್ಲಿ ನಿವೃತ್ತ ನ್ಯಾಯಮುರ್ತಿ ಪ್ರಮೋದ್ ಕೊಹ್ಲಿ, ನಿವೃತ್ತಿ ಲೆಫ್ಟಿನೆಂಟ್ ಕರ್ನಲ್ ವಿಷ್ಣುಕಾಂತ್ ಚತುರ್ವೇದಿ ಮತ್ತು ಲೆಫ್ಟಿನೆಂಟ್ ಜನರಲ್ ಸುರೇಶ್ ಹವಾರೆ ಇದ್ದಾರೆ.
ಟ್ರಸ್ಟ್ ಮೇಲ್ವಿಚಾರಣೆಯಲ್ಲಿ ಕೆಲಸ ನಿರ್ವಹಿಸುವ ಸಿಇಒ ಸಿಬ್ಬಂದಿ ನೇಮಕ ಮಾಡಿಕೊಂಡು, ಹಣಕಾಸು ಮತ್ತು ಆಡಳಿತಾತ್ಮಕ ವ್ಯವಹಾರ ನೋಡಿಕೊಳ್ಳುವರು.

