ಕಾಸರಗೋಡು: ನಗರದ ರೈಲ್ವೆ ನಿಲ್ದಾಣದಲ್ಲಿ ಪಾರ್ಸಲ್ ಸೇವೆಯನ್ನು ಸ್ಥಗಿತಗೊಳಿಸುವ ದಕ್ಷಿಣ ರೈಲ್ವೆಯ ನಿರ್ಧಾರವನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಲಾಗುವುದು ಹಾಗೂ ಈ ವಿಷಯದ ಬಗ್ಗೆ ಚರ್ಚಿಸಲು ಖುದ್ದಾಗಿ ಸಚಿವರನ್ನು ಭೇಟಿಯಾಗಿ ಅಹವಾಲು ಮಂಡಿಸಲಾಗುವುದು ಎಂದು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ. ಎಲ್. ಅಶ್ವಿನಿ ತಿಳಿಸಿದ್ದಾರೆ.
ಕಾಸರಗೋಡು ರೈಲ್ವೆ ನಿಲ್ದಾಣದಲ್ಲಿ ಪಾರ್ಸಲ್ ಸೇವೆಯನ್ನು ಸ್ಥಗಿತಗೊಳಿಸಿದರೆ ಜಿಲ್ಲೆಯ ವಾಣಿಜ್ಯ ಕ್ಷೇತ್ರಕ್ಕೆ ದೊಡ್ಡ ಹೊಡೆತ ಬೀಳಲಿದೆ. ಸಣ್ಣ ಮತ್ತು ಮಧ್ಯಮ ಪ್ರಮಾಣದ ವ್ಯಾಪಾರಿಗಳು ಹಾಗೂ ವಿವಿಧ ವಾಣಿಜ್ಯ ಸಂಸ್ಥೆಗಳು ಸರಕು ಸಾಗಣೆಗೆ ರೈಲ್ವೆ ಪಾರ್ಸಲ್ ಸೇವೆಯನ್ನೇ ಅವಲಂಬಿಸಿದ್ದು, ಈ ಸೇವೆ ಸ್ಥಗಿತಗೊಂಡಲ್ಲಿ ಜಿಲ್ಲೆಯ ವ್ಯಾಪಾರ ವಹಿವಾಟು ಕುಂಠಿತಗೊಳ್ಳುವುದಲ್ಲದೆ, ಸಾರ್ವಜನಿಕರ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಅಶ್ವಿನಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯ ಅಭಿವೃದ್ಧಿ ಮತ್ತು ವಾಣಿಜ್ಯ ಹಿತಾಸಕ್ತಿಗೆ ವಿರುದ್ಧವಾಗಿರುವ ರೈಲ್ವೆ ಇಲಾಖೆಯ ಈ ತೀರ್ಮಾನವನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದ್ದು, ಪಕ್ಷ ಮಧ್ಯ ಪ್ರವೇಶಿಸಿ ಪಾರ್ಸಲ್ ಸೇವೆ ಮುಂದುವರಿಯುವಂತೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಂ.ಎಲ್. ಅಶ್ವಿನಿ ಸ್ಪಷ್ಟಪಡಿಸಿದ್ದಾರೆ.
ಲಾಭದಾಯಕವಲ್ಲದ ಕಾರಣ ನೀಡಿ, ಕಾಸರಗೋಡು ಸಏರಿದಂತೆ ಕೇರಳದ ಕೆಲವೊಂದು ನಿಲ್ದಾಣದಲ್ಲಿ ರೈಲ್ವೆ ಇಲಾಖೆ ಪಾರ್ಸೆಲ್ ಸೇವೆಯನ್ನು ಸ್ಥಗಿತಗೊಳಿಸಲು ರೈಲ್ವೆ ಇಲಾಖೆ ಮುಂದಾಗಿದ್ದು, ಈ ಬಗ್ಗೆ ಕಾಸರಗೋಡಿನಲ್ಲಿ ಈಗಾಘಲೇ ವಿರೋಧ ವ್ಯಕ್ತವಾಗಿದೆ.



