ಕಾಸರಗೋಡು: ನಗದಲ್ಲಿ ಸಂಚಾರ ಸೌಲಭ್ಯ ಸುಧಾರಿಸುವ ಮತ್ತು ನಗರಾಭಿವೃದ್ಧಿ ಚಟುವಟಿಕೆ ತ್ವರಿತಗೊಳಿಸುವ ಗುರಿಯನ್ನು ಹೊಂದಿರುವ ಪ್ರಮುಖ ರಸ್ತೆ ಅಭಿವೃದ್ಧಿ ಯೋಜನೆ ಜಾರಿಗೆ ತರಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದ್ದು, ಇದರಲ್ಲಿ ಎಂ.ಜಿ. ರಸ್ತೆ, ಫೆÇೀರ್ಟ್ ರಸ್ತೆ ಮತ್ತು ಮಡೋನ್ನಾ ಮೂಲಕ ರೈಲು ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಒಳಪಡಿಸಲಾಗಿದೆ.
ಅಭಿವೃದ್ಧಿ ಪ್ರಕ್ರಿಯೆಯ ಅಂಗವಾಗಿ, ರಸ್ತೆಗಳ ಅಳತೆ ಮತ್ತು ಪರಿಶೀಲನೆ ನಡೆಸಲು ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ನೇತೃತ್ವದ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ, ಯೋಜನೆಯ ಅಂದಾಜು ಪಟ್ಟಿ ಸಿದ್ಧಪಡಿಸುವ ಪ್ರಾಥಮಿಕ ಹಂತದ ಕೆಲಸ ಪೂರ್ತಿಗೊಳಿಸಿದೆ.
ನಗರಸಭಾ ಅಧ್ಯಕ್ಷೆ ಶಾಹಿನಾ ಸಲೀಂ, ಉಪಾಧ್ಯಕ್ಷ ಕೆ.ಎಂ. ಹನೀಫಾ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರಾದ ಜಾಫರ್‍ಕಮಲ್ ಮತ್ತು ಸಮೀನಾ ಮುಜೀಬ್ ಅವರ ನೇತೃತ್ವದಲ್ಲಿ ನಗರಸಭೆ ಅಧಿಕಾರಿಗಳುಮತ್ತು ಇತರ ಅಧಿಕಾರಿಗಳು ಸ್ಥಳಪರಿಶೀಲನೆಯಲ್ಲಿ ಪಾಲ್ಗೊಂಡಿದ್ದರು.
ರಸ್ತೆಗಳ ಗುಣಮಟ್ಟ ಅಭಿವೃದ್ಧಿಪಡಿಸುವುದು, ನಗರದಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ಮತ್ತು ಪ್ರಯಾಣ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಈ ಅಭಿವೃದ್ಧಿ ಕಾರ್ಯಗಳು ಅತ್ಯಂತ ನಿರ್ಣಾಯಕವಾಗಲಿವೆ. ಪಾದಚಾರಿಗಳು ಮತ್ತು ವಾಹನ ಸವಾರರ ಸುರಕ್ಷತೆ ಹಾಗೂ ಹೆಚ್ಚು ಅನುಕೂಲಕರವಾದ ಪ್ರಯಾಣದ ವಾತಾವರಣವನ್ನು ಕಲ್ಪಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಪ್ರಸಕ್ತ ಯೋಜನೆಗಳನ್ನು ನಿಗದಿತ ಕಾಲಾವಕಾಶದೊಳಗೆ ಅನುಷ್ಠಾನಗೊಳಿಸಲು ನಗರಸಭೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ರಸ್ತೆ ಕಾಮಗಾರಿಗಳ ಅಂದಾಜು ಪಟ್ಟಿಗಳನ್ನು ಸಿದ್ಧಪಡಿಸುವ ಮತ್ತು ಅಗತ್ಯ ಆಡಳಿತಾತ್ಮಕ ಅನುಮೋದನೆಗಳನ್ನು ಪಡೆಯುವ ಪ್ರಕ್ರಿಯೆಯನ್ನು ತ್ವರಿತಗೊಳಿಸಲಾಗುವುದು ಎಂದು ನಗರಸಭಾಧ್ಯಕ್ಷೆ ಶಾಹಿನಾಸಲೀಂ ತಿಳಿಸಿದ್ದಾರೆ.

