ಮಂಜೇಶ್ವರ: ಮಂಜೇಶ್ವರ ಗ್ರಾಮ ಪಂಚಾಯಿತಿಯ ಕುಂಜತ್ತೂರು ಮಾಡದಲ್ಲಿರುವ ಹಿಂದೂ ಸಮುದಾಯದ ರುದ್ರಭೂಮಿಯನ್ನು ಒತ್ತುವರಿಯಿಂದ ಸಂರಕ್ಷಿಸಿ, ಪುನ:ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಲು ಗ್ರಾಮ ಪಂಚಾಯಿತಿ ಹಾಗೂ ಜಿಲ್ಲಾಡಳಿತ ಮುಂದಾಗಬೇಕು ಎಂದು ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಅಧ್ಯಕ್ಷೆ ಎಂ.ಎಲ್. ಅಶ್ವಿನಿ ಆಗ್ರಹಿಸಿದ್ದಾರೆ.
ಕುಂಜತ್ತೂರು ಮಾಡದ ಹಿಂದೂ ಸ್ಮಶಾನ ಭೂಮಿಯಲ್ಲಿ ಪೂರ್ವಜರ ಅಂತ್ಯಸಂಸ್ಕಾರ ನಡೆಸಿದ ಸ್ಥಳಗಳಲ್ಲಿ ವಿವರಗಳನ್ನು ದಾಖಲಿಸಲಾಗಿದ್ದ ಶಿಲಾಫಲಕಗಳು ಸೇರಿದಂತೆ ಜೆಸಿಬಿ ಬಳಸಿ ಧ್ವಂಸಗೊಳಿಸಿರುವ ಪ್ರದೇಶಕ್ಕೆ ಭೇಟಿ ನೀಡಿದ ನಂತರ ಎಂ.ಎಲ್ ಅಶ್ವಿನಿ ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿದರು. ಹಿಂದೂ ರುದ್ರಭೂಮಿಯ ಬಗ್ಗೆ ಪಂಚಾಯಿತಿ ಆಡಳಿತ ಕೈಗೊಂಡಿರುವಕ್ರಮ ಖಂಡನೀಯ. ಪಂಚಾಯಿತಿ ಅಧೀನದಲ್ಲಿರುವ 2.70 ಎಕರೆ ವಿಸ್ತೀರ್ಣದ ಸ್ಮಶಾನ ಭೂಮಿಯಲ್ಲಿ ವಿದ್ಯುತ್ ಅಥವಾ ನೀರಿನ ಸೌಲಭ್ಯ ಕಲ್ಪಿಸದಿರುವುದು ಅಧಿಕಾರಿಗಳ ತೀವ್ರ ನಿರ್ಲಕ್ಷ್ಯಕ್ಕೆ ನಿದರ್ಶನವಾಗಿದೆ.
ಆವರಣಗೋಡೆ ಸೇರಿದಂತೆ ಮೂಲಸೌಕರ್ಯಗಳನ್ನು ಒದಗಿಸಿ ಸ್ಮಶಾನ ಭೂಮಿಯನ್ನು ಸಂರಕ್ಷಿಸಬೇಕೆಂಬ ಹೈಕೋರ್ಟ್ ಆದೇಶವನ್ನು ಜಾರಿಗೊಳಿಸಲು ಪಂಚಾಯಿತಿ ಅಧಿಕಾರಿಗಳು ಮುಂದಾಗಬೇಕು. ಆದೇಶ ಜಾರಿಗೊಳಿಸುವಲ್ಲಿ ವಿಫಲರಾದರೆ ಸಾರ್ವಜನಿಕರನ್ನು ಒಟ್ಟುಗೂಡಿಸಿ ಪ್ರಬಲ ಹೋರಾಟ ನಡೆಸಲಾಗುವುದು ಎಂದು ಎಂ.ಎಲ್. ಅಶ್ವಿನಿ ಎಚ್ಚರಿಸಿದ್ದಾರೆ.
ಸಾರ್ವಜನಿಕ ರುದ್ರಭೂಮಿ ಸಮಿತಿ ಅಧ್ಯಕ್ಷ ಉಮೇಶ್ ಪೂಮಣ್ಣ, ರಾಜು ಬೆಳ್ಚಪ್ಪಾಡ, ಸಂಜೀವ ಶೆಟ್ಟಿ, ದಯಾನಂದ ಶೆಟ್ಟಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನಿಲ್, ರಾಜೇಶ್ ತೂಮಿನಾಡು, ಮಾಜಿ ಪಂಚಾಯತ್ ಜನಪ್ರತಿನಿಧಿ ಶಶಿಕಲಾ, ಹೃತ್ವಿಕ್ ಮೊದಲಾದವರು ಉಪಸ್ಥಿತರಿದ್ದರು.



