ಕಾಸರಗೋಡು: ಬಿರುಸಿನ ಗಾಳಿಯಿಂದ ಕೂಡಿದ ಮಳೆಗೆ ಕರಿಂದಳ ಕಾಟಿಪೆÇಯಿಲ್ ಎಂಬಲ್ಲಿ ಮನೆ ಸಂಪೂರ್ಣ ಹಾನಿಗೀಡಾಗಿದ್ದು, ನಿದ್ದಿಸುತ್ತಿದ್ದ ತಾಯಿ ಹಾಗೂ ಮಕ್ಕಳು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಶನಿವಾರ ನಸುಕಿಗೆ ಮನೆ ಕುಸಿದುಬಿದ್ದಿದೆ.
ಕಾಟಿಪೊಯಿಲ್ ನಿವಾಸಿ ಕೆ.ಸಿ.ಸುಂದರನ್ ಅವರ ಹೆಂಚು ಹಾಸಿದ ಮನೆ ಗಾಳಿಗೆ ಕುಸಿದುಬಿದ್ದಿದ್ದು ಇದರೊಳಗೆ ಸಿಲುಕಿಕೊಂಡ ಸುಂದರನ್ ಅವರ ಪತ್ನಿ ಮಿನಿ, ಪುತ್ರಿ ಶ್ರೀನಂದ ಎಂಬಿವರನ್ನು ನೆರೆಮನೆ ನಿವಾಸಿಗಳು ರಕ್ಷಿಸಿದ್ದಾರೆ. ಕುಸಿದು ಬಿದ್ದ ಮನೆಯೊಳಗೆ ಸಿಲುಕಿಕೊಂಡಿದ್ದ ಇವರನ್ನು ನೆರೆಮನೆ ನಿವಾಸಿ ಮಣಿ ಯಾನೆ ರಾಧಾಕೃಷ್ಣನ್ ಜೀವದ ಹಂಗು ತೊರೆದು ಕುಸಿಯುತ್ತಿದ್ದ ಮನೆಯೊಳಗೆ ನುಸುಳಿ ಸಾಹಸಿಕವಾಗಿ ಹೊರಗೆ ತಂದಿದ್ದಾರೆ. ಸುಂದರನ್ ಸೆಕ್ಯೂರಿಟಿ ನೌಕರನಾಗಿದ್ದು, ಘಟನೆ ವೇಳೆ ಕರ್ತವ್ಯಕ್ಕೆ ತೆರಳಿದ್ದರು.

