HEALTH TIPS

ಟೈಫಾಯ್ಡ್‌ನಿಂದ ಬಳಲುತ್ತಿರುವ ದೀಪ್ಕೆ, ಸಹಜ ಸ್ಥಿತಿಯತ್ತ ಜಂತರ್ ಮಂತರ್‌

ನವದೆಹಲಿ: ರಾಷ್ಟ್ರ ರಾಜಧಾನಿಯ ಜಂತರ್ ಮಂತರ್‌ನಲ್ಲಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಕಳೆದ 36 ದಿನಗಳಿಂದ ನಡೆಯುತ್ತಿದ್ದ ಹೋರಾಟವು ಶಿಕ್ಷಣ ಸಚಿವ ಧರ್ಮೆಂದ್ರ ಪ್ರಧಾನ್ ರಾಜೀನಾಮೆಯೊಂದಿಗೆ ಅಂತ್ಯಗೊಂಡಿದೆ. ಇದರೊಂದಿಗೆ ಭಾನುವಾರ ಜಂತರ್ ಮಂತರ್ ಸಹಜ ಸ್ಥಿತಿಯತ್ತ ಮರಳುತ್ತಿದೆ. 


ಪ್ರತಿಭಟನೆಗೆ ನೇತೃತ್ವ ವಹಿಸಿದ್ದ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜಿತ್‌ ದೀಪ್ಕೆ ಟೈಫಾಯ್ಡ್‌ನಿಂದ ಬಳಲುತ್ತಿದ್ದು, ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಮತ್ತೊಂದೆಡೆ ಸಾಮಾಜಿಕ ಹೋರಾಟಗಾರ ಸೊನಮ್ ವಾಂಗ್ಚೂಕ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಳೆದೊಂದು ತಿಂಗಳಿನಿಂದ ನಿರಂತರ ಘೋಷವಾಕ್ಯ, ಭಾಷಣ ಮತ್ತು ಕಾವೇರಿದ ಚಟುವಟಿಕೆಗಳಿಗೆ ಸಾಕ್ಷಿಯಾಗಿದ್ದ ರಾಜಧಾನಿಯ ಹೃದಯಭಾಗದಲ್ಲಿರುವ ಈ ಬೃಹತ್ ಪ್ರತಿಭಟನಾ ಸ್ಥಳವು ಈಗ ಭಣಗುಡುತ್ತಿದೆ. ಇಲ್ಲಿ ನಿರ್ಮಿಸಲಾಗಿದ್ದ ಡೇರೆಗಳು ತೆರವಾಗಿದ್ದು, ಸ್ವಯಂಸೇವಕರು ಹಾಗೂ ಬೆಂಬಲಿಗರು ಜಾಗ ಖಾಲಿ ಮಾಡಿದ್ದರಿಂದ ಹೋರಾಟದ ಕುರುಹುಗಳೇ ಇಲ್ಲದಂತಾಗಿದೆ.

ಪ್ರತಿಭಟನೆಗೆ ನೇತೃತ್ವ ವಹಿಸಿದ್ದ ಸಿಜೆಪಿಯ ದೀಪ್ಕೆ ಒಂದು ತಿಂಗಳ ಅವಧಿಯ ನಿರಂತರ ಪ್ರಚಾರ ಮತ್ತು ಅನಿಶ್ಚಿತತೆಯ ನಂತರ ಕೊನೆಗೂ ತಮಗೆ ನೆಮ್ಮದಿಯಿಂದ ನಿದ್ರೆ ಸಾಧ್ಯವಾಗಿದೆ ಎಂದು ವಿಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.

'ತುಂಬಾ ನಿರಾಳವಾಗಿದ್ದೇನೆ. ಮುಂದೇನು ಮಾಡಬೇಕು ಅಥವಾ ಸಂಜೆಯೊಳಗೆ ಏನಾಗಬಹುದು ಎಂಬ ಆತಂಕವಿಲ್ಲದೆ, ಯಾವುದೇ ಗಾಬರಿಯೂ ಇಲ್ಲದೆ ಇಂದು ಕೊನೆಗೂ ನನ್ನ ಕೋಣೆಯಲ್ಲಿ ನಿದ್ರಿಸಿ ಎದ್ದೇಳಲು ಸಾಧ್ಯವಾಯಿತು' ಎಂದು ದೀಪ್ಕೆ ಹೇಳಿದ್ದಾರೆ.

ಜೂನ್ 20ರಂದು ಆರಂಭವಾಗಿದ್ದ ಈ ಪ್ರತಿಭಟನೆಯು ಜುಲೈ 20ರಂದು ಪ್ರತಿಭಟನಾಕಾರರ ಮೇಲಿನ ಪೊಲೀಸ್ ಕ್ರಮದ ನಂತರ ಮತ್ತಷ್ಟು ತೀವ್ರಗೊಂಡಿತ್ತು. ಈ ಹೋರಾಟಕ್ಕೆ ಬೆಂಬಲ ಸೂಚಿಸಿ ಸುದೀರ್ಘ ಉಪವಾಸ ಸತ್ಯಾಗ್ರಹ ಕೈಗೊಂಡ ವಾಂಗ್ಚೂಕ್‌ ಸೇರಿದಂತೆ ಹಲವು ವಿದ್ಯಾರ್ಥಿ ಸಂಘಟನೆಗಳು ಹಾಗೂ ಕಾರ್ಯಕರ್ತರು ಈ ಚಳವಳಿಗೆ ಬೆಂಬಲ ವ್ಯಕ್ತಪಡಿಸಿದ್ದರು.

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದ ವಿದ್ಯಾರ್ಥಿಗಳ ಕುಟುಂಬಗಳಿಗೆ ಪರಿಹಾರ ಹಾಗೂ ಪ್ರತಿಭಟನಾಕಾರರ ವಿರುದ್ಧ ದಾಖಲಿಸಲಾಗಿದ್ದ ಎಫ್‌ಐಆರ್‌ಗಳನ್ನು ಹಿಂಪಡೆಯುವುದು ಸೇರಿದಂತೆ ಸರ್ಕಾರದ ಮುಂದೆ ಇಟ್ಟಿದ್ದ ಉಳಿದ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಒಪ್ಪಿಕೊಂಡ ನಂತರ, ಶನಿವಾರ ಸಂಜೆ ಸಿಜೆಪಿ ಪ್ರತಿಭಟನೆಯನ್ನು ಹಿಂಪಡೆಯುವುದಾಗಿ ಘೋಷಿಸಿತು.

ಕಳೆದ 36 ದಿನಗಳ ಅವಧಿಯನ್ನು 'ಅತ್ಯಂತ ಕಷ್ಟಕರ' ಎಂದು ಬಣ್ಣಿಸಿದ ದೀಪ್ಕೆ, ತಮ್ಮ ಹೋರಾಟದ ಬಗ್ಗೆ ಆರಂಭದಲ್ಲಿದ್ದ ಸಂಶಯಗಳ ಹೊರತಾಗಿಯೂ ಜೊತೆಗೆ ನಿಂತ ದೇಶದಾದ್ಯಂತದ ಬೆಂಬಲಿಗರಿಗೆ ಧನ್ಯವಾದ ಅರ್ಪಿಸಿದರು. 'ನಮ್ಮ ಹೋರಾಟದ ಬಗ್ಗೆ ಎಲ್ಲರೂ ಅನುಮಾನ ವ್ಯಕ್ತಪಡಿಸುತ್ತಿದ್ದಾಗಲೂ, ನಮ್ಮನ್ನು ನಂಬಿ ಪ್ರೀತಿ ತೋರಿಸಿದ ಪ್ರತಿಯೊಬ್ಬ ಬೆಂಬಲಿಗರಿಗೂ ಧನ್ಯವಾದಗಳು. ನಿಮ್ಮ ಬೆಂಬಲವಿಲ್ಲದಿದ್ದರೆ ನಮಗೆ ಇದನ್ನು ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ,' ಎಂದಿದ್ದಾರೆ.

ಪ್ರತಿಭಟನೆ ಮುಕ್ತಾಯಗೊಂಡ ನಂತರ ಶನಿವಾರ ಜಂತರ್ ಮಂತರ್‌ನಲ್ಲಿ ಜಮಾಯಿಸಿದ್ದ ಬೆಂಬಲಿಗರನ್ನು ಭೇಟಿಯಾಗಲು ಸಾಧ್ಯವಾಗದಿದ್ದಕ್ಕಾಗಿ ದೀಪ್ಕೆ ಕ್ಷಮೆಯಾಚಿಸಿದರು. ತಮಗೆ 101 ಡಿಗ್ರಿ ಜ್ವರ ಮತ್ತು ಟೈಫಾಯ್ಡ್ ಇರುವುದರಿಂದ ಭೇಟಿಯಾಗಲು ಸಾಧ್ಯವಾಗಲಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. 'ನನಗೆ ಟೈಫಾಯ್ಡ್ ಬಂದಿದೆ... ಹಾಗಾಗಿ ಮನೆಗೆ ಬರಬೇಕಾಯಿತು,' ಎಂದ ಅವರು, ಪ್ರತಿಭಟನಾ ಸ್ಥಳದಲ್ಲೇ ಉಳಿದುಕೊಂಡು ಹೋರಾಟ ಬೆಂಬಲಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.

'ನಮ್ಮನ್ನು ಅನುಮಾನಿಸಿದ, ವಿಮರ್ಶಿಸಿದ ಜನರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನೀವು ಟೀಕಿಸದಿದ್ದರೆ ನಾವು ಸುಧಾರಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಈ ಹೋರಾಟವು 'ಕೇವಲ ಆರಂಭ' ಎಂದಿರುವ ದೀಪ್ಕೆ, ಸಿಜೆಪಿಗೆ ಇನ್ನೂ ಸುದೀರ್ಘ ಹಾದಿ ಕ್ರಮಿಸಲಿಕ್ಕಿದೆ' ಎಂದಿದ್ದಾರೆ.

ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹದ ಮೂಲಕ ಹೋರಾಟಕ್ಕೆ ಧುಮುಕಿ, ಆರೋಗ್ಯ ಕ್ಷೀಣಿಸಿದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ವಾಂಗ್ಚೂಕ್‌ ಪ್ರಸ್ತುತ ಮೇದಾಂತ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

ಜಂತರ್ ಮಂತರ್‌ನಲ್ಲಿ ಪೌರ ಕಾರ್ಮಿಕರು ಕಾರ್ಯಪ್ರವೃತರಾಗಿದ್ದು, ಸುಮಾರು 52 ಮೆಟ್ರಿಕ್ ಟನ್‌ಗಳಷ್ಟು ತ್ಯಾಜ್ಯವನ್ನು ಈಗಾಗಲೇ ವಿಲೇವಾರಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries