ನವದೆಹಲಿ: ಕರ್ತವ್ಯ ಪ್ರಜ್ಞೆ ಮತ್ತು ವಿನಮ್ರತೆಯಿಂದ ಈ ಜವಾಬ್ದಾರಿಯನ್ನು ಸ್ವೀಕರಿಸುವುದಾಗಿ ಕೇಂದ್ರ ಶಿಕ್ಷಣ ಸಚಿವರಾಗಿ ಹೆಚ್ಚುವರಿ ಹೊಣೆ ವಹಿಸಿಕೊಂಡಿರುವ ಪ್ರಲ್ಹಾದ ಜೋಶಿ ಶನಿವಾರ ಹೇಳಿದ್ದಾರೆ.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಶನಿವಾರ ಮಧ್ಯಾಹ್ನ ರಾಜೀನಾಮೆ ನೀಡಿದ ಬೆನ್ನಲ್ಲೇ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಸರಬರಾಜು, ನವೀಕರಿಸಬಹುದಾದ ಇಂಧನ ಸಚಿವರಾಗಿರುವ ಪ್ರಲ್ಹಾದ ಜೋಶಿ ಅವರು ನೂತನ ಶಿಕ್ಷಣ ಸಚಿವರಾಗಿ ಹೆಚ್ಚುವರಿ ಹೊಣೆ ವಹಿಸಿಕೊಂಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರಲ್ಹಾದ ಜೋಶಿ, 'ನನಗೆ ಈ ಹೊಸ ಜವಾಬ್ದಾರಿಯನ್ನು ನೀಡಿರುವುದು ಈಗಷ್ಟೇ ತಿಳಿಯಿತು. ಅತ್ಯಂತ ಕರ್ತವ್ಯ ಪ್ರಜ್ಞೆ ಮತ್ತು ವಿನಮ್ರತೆಯಿಂದ ನಾನು ಈ ಹೊಣೆಗಾರಿಕೆಯನ್ನು ಸ್ವೀಕರಿಸುತ್ತೇನೆ' ಎಂದಿದ್ದಾರೆ.
ಮುಂದುವರಿದು, 'ಕಳೆದ 12 ವರ್ಷಗಳ ಪ್ರಧಾನಿ ಮೋದಿ ಸರ್ಕಾರದ ಆಡಳಿತದಲ್ಲಿ ಹಲವು ಐತಿಹಾಸಿಕ ಸಾಧನೆಗಳಾಗಿವೆ. ಧರ್ಮೇಂದ್ರ ಪ್ರಧಾನ್ ಅವರು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದಾರೆ. ಪ್ರಧಾನಿಯವರ ಮಾರ್ಗದರ್ಶನದಲ್ಲಿ ನನ್ನ ಶಕ್ತಿಮೀರಿ ಕೆಲಸ ಮಾಡಲು ಪ್ರಯತ್ನಿಸುತ್ತೇನೆ' ಎಂದೂ ಅವರು ಹೇಳಿದ್ದಾರೆ.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ದೇಶದಾದ್ಯಂತ ವಿದ್ಯಾರ್ಥಿಗಳು ನಡೆಸಿದ ತೀವ್ರ ಪ್ರತಿಭಟನೆಗೆ ಮಣಿದು ಧರ್ಮೇಂದ್ರ ಪ್ರಧಾನ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.
ಶನಿವಾರ ಮಧ್ಯಾಹ್ನ 2.18ಕ್ಕೆ 'ಎಕ್ಸ್'ನಲ್ಲಿ ರಾಜೀನಾಮೆ ಪತ್ರವನ್ನು ಪೋಸ್ಟ್ ಮಾಡಿದ ಪ್ರಧಾನ್, 'ಕಳೆದ ಹತ್ತು ದಿನದ ಬೆಳವಣಿಗೆಗಳು ನನಗೆ ತೀವ್ರ ನೋವುಂಟು ಮಾಡಿವೆ. ರಾಜೀನಾಮೆ ನಿರ್ಧಾರವು ನನಗೆ ವೈಯಕ್ತಿಕ ಪ್ರತಿಷ್ಠೆಯ ವಿಷಯವೇನೂ ಅಲ್ಲ' ಎಂದು ಹೇಳಿದ್ದರು.
ಕೇಂದ್ರ ಶಿಕ್ಷಣ ಸಚಿವರಾಗಿ ಹೆಚ್ಚುವರಿ ಹೊಣೆ ವಹಿಸಿಕೊಂಡಿರುವ ಪ್ರಲ್ಹಾದ ಜೋಶಿ ಅವರು ಧಾರವಾಡ ಲೋಕಸಭಾ ಕ್ಷೇತ್ರದಿಂದ ಸತತ ಐದು ಬಾರಿ ಸಂಸದರಾಗಿ ಆಯ್ಕೆ ಆದವರು. 2024ರಿಂದ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಸರಬರಾಜು, ನವೀಕರಿಸಬಹುದಾದ ಇಂಧನ ಸಚಿವರಾಗಿದ್ದಾರೆ.
ಹುಬ್ಬಳ್ಳಿಯ ಕಾಡಸಿದ್ಧೇಶ್ವರ ಕಾಲೇಜಿನಿಂದ ಬಿ.ಎ ಪದವಿ ಪಡೆದಿರುವ ಜೋಶಿ ಅವರಿಗೆ, ಈಗ ದೇಶದ ಶಿಕ್ಷಣ ಕ್ಷೇತ್ರದ ಚುಕ್ಕಾಣಿ ಹಿಡಿಯುವ ಅವಕಾಶ ದೊರೆತಿದೆ.
ಬಾಲ್ಯದ ದಿನಗಳಲ್ಲಿಯೇ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸೇರಿದ ಜೋಶಿ, ಸಂಘದ ಹಲವು ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ.

