ಮುಂಬೈ: ಸಾರ್ವಜನಿಕರ ಕುಂದುಕೊರತೆಗಳನ್ನು ಪರಿಹರಿಸಲು ಶಾಂತಿಯುತ ಪ್ರತಿಭಟನೆ, ಪ್ರಜಾಪ್ರಭುತ್ವ ಹಾಗೂ ಮಾತುಕತೆಗಳೇ ಏಕೈಕ ಮಾರ್ಗ ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಝಾರೆ ಹೇಳಿದ್ದಾರೆ.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯ ನೈತಿಕ ಹೊಣೆ ಹೊತ್ತು ಶನಿವಾರ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ಬಳಿಕ, ಕಾಕ್ರೋಚ್ ಜನತಾ ಪಾರ್ಟಿ ತನ್ನ ಪ್ರತಿಭಟನೆಯನ್ನು ಹಿಂಪಡೆದಿರುವ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.
ಅಹಿಲ್ಯಾನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಣ್ಣಾ ಹಝಾರೆ, ಸಾರ್ವಜನಿಕರ ಕುಂದುಕೊರತೆಗಳನ್ನು ಪ್ರಜಾಪ್ರಭುತ್ವ ಮತ್ತು ಮಾತುಕತೆಗಳ ಮೂಲಕ ಬಗೆಹರಿಸಿಕೊಳ್ಳುವುದು ತುಂಬಾ ಮುಖ್ಯವಾಗಿದೆ ಎಂದು ಹೇಳಿದ್ದಾರೆ. "ಇದು ಪ್ರಜಾಪ್ರಭುತ್ವವಾಗಿದ್ದು, ಫರ್ಮಾನುಗಳ ಮೂಲಕ ಆಳಲು ಸಾಧ್ಯವಿಲ್ಲ ಹಾಗೂ ಪ್ರತಿಯೊಬ್ಬರೂ ಪ್ರಜಾತಂತ್ರದ ಮಾರ್ಗವನ್ನು ಅನುಸರಿಸಬೇಕು" ಎಂದು ಅವರು ಕಿವಿಮಾತು ಹೇಳಿದ್ದಾರೆ.
"ಮಾತುಕತೆಯ ಮೂಲಕ ಯಾವುದೇ ಸಮಸ್ಯೆಯಾದರೂ ಬಗೆಹರಿಯುತ್ತದೆ. ಮಾತುಕತೆಗಳು ಪರಿಹಾರಕ್ಕೆ ದಾರಿ ಮಾಡಿಕೊಡುತ್ತವೆ. ಪ್ರಕ್ಷುಬ್ಧತೆಯನ್ನು ಸೃಷ್ಟಿಸಿ, ತಪ್ಪು ದಾರಿಯಲ್ಲಿ ಹೋಗುವುದರಿಂದ, ಏನನ್ನೂ ಬಗೆಹರಿಸಲು ಸಾಧ್ಯವಿಲ್ಲ" ಎಂದೂ ಅವರು ಅಭಿಪ್ರಾಯ ಪಟ್ಟಿದ್ದಾರೆ.

