ಲಖನೌ: 'ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಕೇಂದ್ರ ಶಿಕ್ಷಣ ಸಚಿವರಾಗಿದ್ದ ಧರ್ಮೇಂದ್ರ ಪ್ರಧಾನ್ ವಿರುದ್ಧ ಕಾಕ್ರೋಚ್ ಜನತಾ ಪಕ್ಷ ನಡೆಸಿದ್ದ ಪ್ರತಿಭಟನೆಗೆ ಕೊನೆಗೂ ನ್ಯಾಯ ಸಿಕ್ಕಿದೆ. ಆದರೆ, ಈ ಶಿಕ್ಷಣ ಮಂತ್ರಿಯ ರಾಜೀನಾಮೆಯನ್ನು ಸಂಭ್ರಮಿಸಲು ನಮ್ಮ ಮಗ ಈಗ ಬದುಕಿರಬೇಕಿತ್ತು' ಎಂದು ಮೃತ ನೀಟ್ ಆಕಾಂಕ್ಷಿ ರಿತಿಕ್ ತಂದೆ ಅನುಪ್ ಮಿಶ್ರಾ ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದರಿಂದ ಮೇ 3ರಂದು ನಡೆದಿದ್ದ ನಿಟ್-ಯುಜಿ ಪರೀಕ್ಷೆಯನ್ನು ಮೇ 12ರಂದು ರದ್ದುಗೊಳಿಸಲಾಗಿತ್ತು. ಜೂನ್ 21ರಂದು ಮರು ಪರೀಕ್ಷೆ ನಡೆಸಿತ್ತು. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಗೆ ಬೇಸತ್ತ ಅನೇಕ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡರು. ಈ ಘಟನೆಗೆ ಮನನೊಂದು ಮೃತಪಟ್ಟವರಲ್ಲಿ ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಅನುಪ್ ಮಿಶ್ರಾ ಪುತ್ರ ರಿತಿಕ್ ಕೂಡ ಒಬ್ಬರು.
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕುರಿತು ಅಭಿಪ್ರಾಯ ಹಂಚಿಕೊಂಡಿರುವ ಅನುಪ್ ಮಿಶ್ರಾ, 'ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿ ಸಿಜೆಪಿ ನಡೆಸಿದ್ದ 37 ದಿನಗಳ ವಿದ್ಯಾರ್ಥಿ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಈ ಕ್ಷಣವನ್ನು ಆನಂದಿಸಲು ನನ್ನ ಮಗ ಬದುಕಿರಬೇಕಿತ್ತು. ನೀಟ್ ಪರೀಕ್ಷೆಗಾಗಿ ರಿತಿಕ್, ಮೂರನೇ ಬಾರಿ ಪ್ರಯತ್ನಿಸಿದ್ದನು. ಅದಕ್ಕಾಗಿ ಅವನು ಪ್ರತಿದಿನ ನಿರಂತರ ಅಭ್ಯಾಸ ಮಾಡುತ್ತಿದ್ದನು. ಆದರೆ ಪ್ರಶ್ನೆ ಪತ್ರಿಕೆ ಸೋರಿಕೆ ಬಳಿಕ ಅವನು ಎದೆಗುಂದಿ ನಮ್ಮನ್ನು ಬಿಟ್ಟು ಆಗಲಿದ್ದಾನೆ' ಎಂದು ಮಗನನ್ನು ನೆನೆದು ಭಾವುಕರಾಗಿದ್ದಾರೆ.
ಧರ್ಮೇಂದ್ರ ಪ್ರಧಾನ್ ಮೊದಲೇ ರಾಜೀನಾಮೆ ನೀಡಿದ್ದರೆ, ಜುಲೈ 20 ರಂದು ದೆಹಲಿಯ ಜಂತರ್ ಮಂತರ್ನಲ್ಲಿ ವಿದ್ಯಾರ್ಥಿಗಳ ಮೇಲೆ ಪೊಲೀಸ್ ಹಲ್ಲೆ ನಡೆಸುತ್ತಿರಲಿಲ್ಲ. ಪ್ರಧಾನ್ ಅವರನ್ನು ಹುದ್ದೆಯಿಂದ ಕೆಳಗಿಳಿಸಲು ವಿದ್ಯಾರ್ಥಿಗಳ ಪರಿಶ್ರಮವೇ ಕಾರಣ. ಯುವ ಸಮೂಹ, ತಮ್ಮ ದೃಢ ನಿರ್ಧಾರದಿಂದ ಶಿಕ್ಷಣ ವ್ಯವಸ್ಥೆಯನ್ನು ಸರಿದೂಗಿಸಲು ಪಣ ತೊಟ್ಟಿದ್ದರು. ಇದರ ನಡುವೆ ವಿದ್ಯಾರ್ಥಿಗಳ ಮೇಲೆ ಪೊಲೀಸರು ಹಲ್ಲೆ ಮಾಡಿದ್ದು ಬೇಸರದ ಸಂಗತಿ. ಈ ಹೋರಾಟವನ್ನು ನೋಡಲು ನಮ್ಮ ಮಗ ಬದುಕಿಲ್ಲ. ಆದರೆ, ಯುವಕರ ಪ್ರತಿಭಟನೆಗೆ ನ್ಯಾಯ ಸಿಕ್ಕಿದೆ. ಅದೇ ಒಂದು ರೀತಿಯ ಸಮಾಧಾನ' ಎಂದಿದ್ದಾರೆ.

