ನವದೆಹಲಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ವಿರೋಧಿಸಿ ಜಂತರ್ ಮಂತರ್ನಲ್ಲಿ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳ ಮೇಲಿನ ಅಮಾನವೀಯ ಹಲ್ಲೆಯ ಹೊಣೆಗಾರಿಕೆಯನ್ನು ಪ್ರಶ್ನಿಸಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.
ರಾಹುಲ್ ಗಾಂಧಿ ಅವರ ಪತ್ರದಲ್ಲಿ, ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಯುವಕರ ವಿರುದ್ಧ 'ಪೆಲೆಟ್ ಗನ್'ಗಳ ಬಳಕೆ ಸೇರಿದಂತೆ ಅಮಾನವೀಯ ಹಲ್ಲೆ ನಡೆಸಲು ಯಾರು ಸೂಚಿಸಿದ್ದರು, ದೇಶವು ಇದಕ್ಕೆ ಉತ್ತರವನ್ನು ಬಯಸುತ್ತಿದೆ ಎಂದು ಪ್ರಶ್ನಿಸಿದ್ದಾರೆ.
ಜುಲೈ 20ರಂದು ದೆಹಲಿಯಲ್ಲಿ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳ ಮೇಲಿನ ಅಮಾನವೀಯ ಹಲ್ಲೆಗೆ ಸಂಬಂಧಿಸಿದಂತೆ ಹೊಣೆಗಾರಿಕೆಯನ್ನು ಕೋರಿ ನಾನು ಈ ಪತ್ರ ಬರೆಯುತ್ತಿದ್ದೇನೆ. ನಮ್ಮ ವಿದ್ಯಾರ್ಥಿಗಳು ನ್ಯಾಯಯುತ ಮತ್ತು ಹೊಣೆಗಾರಿಕೆಯುಳ್ಳ ಶಿಕ್ಷಣ ವ್ಯವಸ್ಥೆಯನ್ನು ಆಗ್ರಹಿಸುತ್ತಿದ್ದರು. ಅವರ ಮಾತನ್ನು ಆಲಿಸುವ ಬದಲು, ಭದ್ರತಾ ಪಡೆಗಳು ಶಸ್ತ್ರಾಸ್ತ್ರಗಳು ಮತ್ತು ಅಶ್ರುವಾಯು ಸೇರಿದಂತೆ ವಿವೇಚನೆಯಿಲ್ಲದ ಬಲಪ್ರಯೋಗದ ಮೂಲಕ ಅವರ ಮೇಲೆ ಹಲ್ಲೆ ನಡೆಸಿದವು ಎಂದು ಪತ್ರದಲ್ಲಿ ಬರೆದಿದ್ದಾರೆ.
ದೆಹಲಿಯಲ್ಲಿ ನಿಯೋಜಿಸಲಾದ ಭದ್ರತಾ ಪಡೆಗಳು ಅಂತಿಮವಾಗಿ ನಿಮಗೆ ಉತ್ತರದಾಯಿಗಳಾಗಿರುತ್ತವೆ, ಹಾಗಾಗಿ ನಾನು ನಿಮಗೆ ಕೇಳುತ್ತಿದ್ದೇನೆ. ಗೃಹ ಸಚಿವರಾಗಿ, ವಿದ್ಯಾರ್ಥಿಗಳ ವಿರುದ್ಧ ಪೆಲೆಟ್ ಗನ್ಗನ್ನು ಬಳಸಲು ನೀವು ಅನುಮೋದನೆ ನೀಡಿದ್ದೀರಾ? ಸಾಮಾನ್ಯ ಉಡುಪಿನಲ್ಲಿದ್ದುಕೊಂಡು ಲಾಠಿಗಳಿಂದ ವಿದ್ಯಾರ್ಥಿಗಳನ್ನು ಥಳಿಸುತ್ತಿರುವುದು ಕಂಡುಬಂದ ವ್ಯಕ್ತಿಗಳು ಪೊಲೀಸ್ ಸಿಬ್ಬಂದಿಯೇ ಅಥವಾ ಸ್ವಯಂಸೇವಕರೇ? ಎಂದು ಅಮಿತ್ ಶಾ ಅವರಿಗೆ ಪ್ರಶ್ನಿಸಿದ್ದಾರೆ.

