ಉಪ್ಪಳ: ಜೋಡುಕಲ್ಲು ಪ್ರದೇಶದ ದೇರಂಬಳದ ನದಿಗೆ ಬಿದ್ದು, ನೀರುಪಾಲಾಗುತ್ತಿದ್ದ ಗೃಹಿಣಿಯನ್ನು ಜೀವದ ಹಂಗು ತೊರೆದು ರಕ್ಷಿಸಿದ ಉದಯ ಕುಮಾರ್ ಶೆಟ್ಟಿ ಅವರನ್ನು ಬಿರುವೆರ್ ಕುಡ್ಲ ಮಂಜೇಶ್ವರ ತಾಲೂಕು ಘಟಕದ ವತಿಯಿಂದ ಸನ್ಮಾನಿಸಲಾಯಿತು.
ಬಿರುವೆರ್ ಕುಡ್ಲ ಮಂಜೇಶ್ವರ ತಾಲೂಕು ಘಟಕದ ಸದಸ್ಯರಾದ ಐತಪ್ಪ ಪೂಜಾರಿ ದೇರಂಬಳ ಅವರ ಫುತ್ರಿ ಕುಮಾರಿ ಸುಶ್ಮಿತಾ ಅವರು ತನ್ನ ಸಹೋದರಿ ನಿಶ್ಚಿತಾ ಅವರನ್ನು ಕರೆತರುವ ಮಧ್ಯೆ, ಉಪ್ಪಳ ಜೋಡುಕಲ್ಲಿನ ದೇರಂಬಳ ಹೊಳೆಗೆ ತತ್ಕಾಲಿಕವಾಗಿ ಅಳವಡಿಸಲಾಗಿದ್ದ ಅಡಕೆಮರದಿಂದ ನಿರ್ಮಿಸಲಾಗಿದ್ದ ಕಾಲುಸಂಕದಿಂದ ನೀರಿಗೆ ಬಿದ್ದಿದ್ದು, ಇವರನ್ನು ಉದಯಕುಮಾರ್ ಅವರು ಅತ್ಯಂತ ಸಾಹಸಕರ ರೀತಿಯಲ್ಲಿ ಸುಮಾರು 200ಮೀ. ವರೆಗೆ ಈಜಿ ಸಾಗಿ ರಕ್ಷಿಸಿ ದಡ ಸೇರಿಸಿದ್ದರು.
ಘಟಕದ ಗೌರವಾಧ್ಯಕ್ಷ ಶೀನಪ್ಪ ಪೂಜಾರಿ ಅಲಾರು ಅವರು ಶಾಲುಹೊದಿಸಿ, ಗೌರವಧನ ನೀಡಿ ಉದಯಕುಮಾರ್ ಶೆಟ್ಟಿ ಅವರನ್ನು ಸನ್ಮಾನಿಸಿದರು. ಪ್ರಧಾನ ಕಾರ್ಯದರ್ಶಿ ಅನಿಲ್ ಪ್ರತಾಪನಗರ, ಸದಸ್ಯರಾದ ಆನಂದ ಬೀರಿಗುಡ್ಡೆ, ಹರಿಣಿ ಪ್ರತಾಪನಗರ, ಜಯಂತಿ ಉದಯಕುಮಾರ್ ಪೈವಳಿಕೆ ಮೊದಲದವರು ಉಪಸ್ಥಿತರಿದ್ದರು. ಶಿಥಿಲಾವಸ್ಥೆಯಲ್ಲಿದ್ದ ಕಾಲುಸಂಕದ ತಳಭಾಗದವರೆಗೂ ನೀರು ತುಂಬಿ ಹರಿಯುತ್ತಿದ್ದ ಹಿನ್ನೆಲೆಯಲ್ಲಿ ತಲೆಸುತ್ತಿದ ಅನುಭವದಿಂದ ಆಯತಪ್ಪಿ ನೀರಿಗೆ ಬಿದ್ದಿದ್ದರು. ಈ ಸಂದರ್ಭ ಇವರ ಸಹೋದರಿ ನಿಶ್ಚಿತಾ ಬೊಬ್ಬಿಡುತ್ತಿದ್ದಂತೆ ಸನಿಹದ ತೋಟದಲ್ಲಿದ್ದ ಉದಯಕುಮಾರ್ ಶೆಟ್ಟಿಅವರು ಧಾವಿಸಿ ನೆರವಾಗಿದ್ದರು. ಈಸಂದರ್ಭ ಸುಶ್ಮಿತಾ ಅವರ ವಶದಲ್ಲಿದ್ದ ಮೊಬೈಲ್‍ಗಳು, ಟ್ಯಾಬ್, ಶಾಲಾ ದಾಖಲೆಗಳನ್ನೊಳಗೊಂಡ ಬ್ಯಾಗ್ ನೀರುಪಾಲಾಗಿತ್ತು.



