ಉಪ್ಪಳ: ಮಂಗಲ್ಪಾಡಿ- ಮೀಂಜ ಪಂಚಾಯತಿಳನ್ನು ಜೋಡಿಸುವ ದೇರಂಬಳ ಕಾಂಕ್ರೀಟ್ ಸೇತುವೆ ಹಾನಿಗೊಂಡು ಹಲವು ವರ್ಷಗಳು ಕಳೆದರೂ ಪುನರ್ ನಿರ್ಮಾಣ ಕ್ರಮಗಳು ಆರಂಭಿಸದಿರುವುದು ಜನರೊಂದಿಗಿನ ತೀವ್ರ ಅನೀತಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಸ್ಥಳ ಸಂದರ್ಶನ ನಡೆಸಿ ತಿಳಿಸಿದರು.
ಮೀಂಜ ಪಂಚಾಯತಿಯಿಂದ ವಿದ್ಯಾರ್ಥಿಗಳು ಸಹಿತ ನೂರಾರು ಮಂದಿ ದಿನಂಪ್ರತಿ ಈ ಸೇತುವೆಯ ಮೂಲಕ ಪ್ರಯಾಣಿಸುತ್ತಿದ್ದಾರೆ. ಸೇತುವೆ ಕುಸಿದು ಬಿದ್ದ ಕಾರಣ ಕೇವಲ 600 ಮೀಟರ್ ದೂರದ ಬಸ್ ತಂಗುದಾಣಕ್ಕೆ ತಲುಪಲು ಕಿಲೋ ಮೀಟರ್‍ಗಳಷ್ಟು ಸುತ್ತುಬಳಸಿ ಹೋಗಬೇಕಾದ ಸ್ಥಿತಿ ಪ್ರಸ್ತುತ ಇದೆ. ಇದು ವಿದ್ಯಾರ್ಥಿಗಳನ್ನು ಹಾಗೂ ಕಾರ್ಮಿಕರನ್ನು, ಸಾರ್ವಜನಿಕರನ್ನು ಸಂಕಷ್ಟಕ್ಕೆ ದೂಡಿದೆ.
ಸೋಮವಾರ ಸಂಕವನ್ನು ದಾಟುತ್ತಿದ್ದ ಸುಶ್ಮಿತ ಎಂಬ ಯುವತಿ ನೀರಿಗೆ ಬಿದ್ದು ಅಪಾಯ ಸಂಭವಿಸಿದ ವೇಳೆ ಸ್ಥಳೀಯರಾದ ಉದಯ ಕುಮಾರ್ ಶೆಟ್ಟಿ ತನ್ನ ಪ್ರಾಣವನ್ನು ಪಣಕ್ಕಿಟ್ಟು ಯುವತಿಯನ್ನು ರಕ್ಷಿಸಿದ್ದಾರೆ. ಆದರೆ ಈ ವೇಳೆ ಯುವತಿಯ ಬ್ಯಾಗ್‍ನಲ್ಲಿದ್ದ ಪ್ರಮಾಣಪತ್ರಗಳು, ಮೊಬೈಲ್ ಪೋನ್, ಟ್ಯಾಬ್ ಎಂಬಿವು ಸಹಿತ ಬೆಲೆಬಾಳುವ ದಾಖಲೆಗಳು, ಉಪಕರಣಗಳು ನೀರುಪಾಲಾಗಿವೆ. ಈ ರೀತಿಯ ಅಪಾಯಗಳು ಇನ್ನೂ ಪುನರಾವರ್ತಿಸದಿರಲು ದೇರಂಬಳ ಸೇತುವೆಯನ್ನು ತುರ್ತಾಗಿ ಪುನರ್ ನಿರ್ಮಿಸಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ನೀಡಿರುವುದಾಗಿ ಎಂ.ಎಲ್. ಅಶ್ವಿನಿ ತಿಳಿಸಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ತುರ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಮಂಜೇಶ್ವರ ಬ್ಲಾಕ್ ಪಂ. ಸದಸ್ಯೆ ಜ್ಯೋತಿ ಪಿ. ರೈ, ಮೀಂಜ ಪಂ. ಸದಸ್ಯೆ ಶಾಲಿನಿ ಬಿ. ಶೆಟ್ಟಿ, ವಿನೋದ್ ಜಿ, ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಪದ್ಮನಾಭ ರೈ, ಹಿರಿಯ ಕಾರ್ಯಕರ್ತ ಉದಯ ಕುಮಾರ್, ರತ್ನಾಕರ ಶೆಟ್ಟಿ, ಸಂಕಪ್ಪ ಆಳ್ವ, ದೇವದಾಸ್ ಸ್ಥಳ ಸಂದರ್ಶನ ವೇಳೆ ಅಶ್ವಿನಿ ಜೊತೆಗಿದ್ದರು.

.jpg)
.jpg)
