ಸನಾ: ಇರಾನ್ ಮೇಲೆ ಹೊಸದಾಗಿ ದಾಳಿ ನಡೆಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚಿಂತನೆ ನಡೆಸುತ್ತಿರುವ ಬೆನ್ನಲ್ಲೇ, ಸೌದಿ ಅರೇಬಿಯಾದ ಮೇಲೆ ಯೆಮೆನ್‌ನ ಹೂಥಿ ಬಂಡುಕೋರರು ಶನಿವಾರ ಕ್ಷಿಪಣಿ ದಾಳಿ ನಡೆಸಿದ್ದಾರೆ. ಸೌದಿ ನಗರ ಜಿಜಾನ್ ಗುರಿಯಾಗಿಸಿ ದಾಳಿ ನಡೆಸಲಾಗಿದೆ.
ಸೌದಿಯ ರಕ್ಷಣಾ ಪಡೆ ನೈರುತ್ಯ ಕರಾವಳಿ ಹಾಗೂ ಉತ್ತರದ ಯಾನ್ಬು ನಗರದಲ್ಲಿ ಸಾರ್ವಜನಿಕರಿಗೆ ಎಚ್ಚರಿಕೆ ಸಂದೇಶ ನೀಡಿದೆ ಎಂದು ಹೂಥಿ ಮಾಧ್ಯಮ ತಿಳಿಸಿದೆ.
ಹೂಥಿ ಬಂಡುಕೋರರ ಮಾಧ್ಯಮ ಸಂಸ್ಥೆ 'ಅನ್ಸರೊಲ್ಲಾ' ಈ ಕುರಿತು ಟೆಲಿಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು, ವಿಡಿಯೊವೊಂದನ್ನು ಹಂಚಿಕೊಂಡಿದೆ. ಜಿಜಾನ್‌ನಲ್ಲಿರುವ 'ಸೌದಿ ಆರಾಮ್ಕೊ'ಗೆ ಸೇರಿದ ತೈಲ ಸಂಸ್ಕರಣಾ ಘಟಕದಲ್ಲಿ ಬೆಂಕಿ ಹೊತ್ತಿಕೊಂಡಿರುವ ಹಾಗೂ ದಟ್ಟಹೊಗೆ ಕಾಣಿಸಿಕೊಂಡಿರುವ ದೃಶ್ಯಗಳು ಈ ವಿಡಿಯೊದಲ್ಲಿವೆ.
ಇರಾನ್ ವಿರುದ್ಧ 13 ದಿನಗಳಿಂದ ಸತತ ಬಾಂಬ್ ದಾಳಿ ನಡೆಸಿದ್ದ ಅಮೆರಿಕ, ಶನಿವಾರ ಮೊದಲ ಬಾರಿಗೆ ಯಾವುದೇ ದಾಳಿ ನಡೆಸಿಲ್ಲ.
ಸೌದಿ ಅರೇಬಿಯಾ ಮತ್ತು ಯೆಮೆನ್ ನಡುವಿನ ಉದ್ವಿಗ್ನತೆಗೆ ಕೆಲವೇ ಗಂಟೆಗಳ ಮೊದಲು, 'ಇರಾನ್ ಮೇಲೆ ಪ್ರಮುಖ ದಾಳಿಗಳನ್ನು ನಡೆಸಬೇಕೇ ಬೇಡವೇ ಎಂಬ ಬಗ್ಗೆ ಇನ್ನೂ ನಿರ್ಧರಿಸಿಲ್ಲ' ಎಂದು ಟ್ರಂಪ್ ಹೇಳಿದ್ದಾರೆ.
'ಇರಾನ್ ಮೇಲೆ ಕಠಿಣ ದಾಳಿ ಮಾಡುವ ನಿರ್ಧಾರ ತೆಗೆದುಕೊಂಡಿದ್ದೀರಾ' ಎಂಬ ಸುದ್ದಿಗಾರರ ಪ್ರಶ್ನೆಗೆ, 'ಇಲ್ಲ, ಈ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ' ಎಂದು ತಿಳಿಸಿದ್ದಾರೆ.
'ನಾವು ಅವರೊಂದಿಗೆ ಮಾತನಾಡುತ್ತಿದ್ದೇವೆ. ದಿನಗಳು ಉರುಳಿದಂತೆ ಅವರು ಹೆಚ್ಚು ಗಂಭೀರವಾಗಿ ವರ್ತಿಸುತ್ತಿದ್ದಾರೆ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನೊಂದೆಡೆ, ಬಹರೇನ್‌ನಲ್ಲಿರುವ ಅಮೆಜಾನ್ ಡೇಟಾ ಸೆಂಟರ್ ಅನ್ನು ಗುರಿಯಾಗಿಸಿಕೊಂಡಿರುವುದಾಗಿ ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್(ಐಆರ್‌ಜಿಸಿ) ತಿಳಿಸಿದೆ ಎಂದು ಸರ್ಕಾರಿ ಸ್ವಾಮ್ಯದ ಮಾಧ್ಯಮ ವರದಿ ಮಾಡಿದೆ. ಆದರೆ, ಈ ಹೇಳಿಕೆ ಬಗ್ಗೆ ಅಮೆರಿಕದ ಅಮೆಜಾನ್ ಕಂಪನಿಯಾಗಲಿ, ಬಹರೇನ್ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಅಲ್ಲದೆ, ತನ್ನ ಯಾವುದೇ ಸಂಸ್ಥೆ ಅಥವಾ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ದಾಳಿ ನಡೆದಿರುವ ಬಗ್ಗೆ ಅಮೆರಿಕದಿಂದಲೂ ಯಾವುದೇ ಸ್ಪಷ್ಟೀಕರಣ ಬಂದಿಲ್ಲ.
-ಅಬ್ಬಾಸ್ ಅರಾಗ್ಚಿ, ಇರಾನ್‌ನ ವಿದೇಶಾಂಗ ಸಚಿವಸೌದಿ ಅರೇಬಿಯಾ ಮತ್ತು ಯೆಮೆನ್‌ನ ಹೂಥಿ ಬಂಡುಕೋರರ ನಡುವೆ ಉಲ್ಬಣಗೊಂಡಿರುವ ಸಂಘರ್ಷಕ್ಕೆ ಸೇನಾ ಕಾರ್ಯಾಚರಣೆಯಿಂದ ಪರಿಹಾರ ಸಿಗುವುದಿಲ್ಲ

