ನವದೆಹಲಿ: ನಾನು ತುಂಬಾ ಚೆನ್ನಾಗಿದ್ದೇನೆ. ಸಿಜೆಪಿಯ ಸಂಸತ್ ಚಲೊ ಪ್ರತಿಭಟನೆಯಲ್ಲಿ ಭಾಗವಹಿಸಲು ಹೊರಗೆ ತೆರಳಲು ತಾತ್ಕಾಲಿಕ ಅನುಮತಿಯಾದರೂ ಕೊಡಿ ಎಂದು ಪರಿಸರ ಕಾರ್ಯಕರ್ತ ಸೊನಮ್ ವಾಂಗ್ಚೂಕ್ ಅವರು ತಮ್ಮನ್ನು ದಾಖಲಿಸಿರುವ ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಯ ಆಡಳಿತ ಮಂಡಳಿಗೆ ಪತ್ರ ಬರೆದಿದ್ದಾರೆ.
ಆಸ್ಪತ್ರೆಯ ನಿರ್ದೇಶಕರಿಗೆ ಕೈಬರಹದಲ್ಲಿ ಬರೆದಿರುವ ಪತ್ರದಲ್ಲಿ ಅವರು, ನನ್ನ ಆರೋಗ್ಯ ಸಂಬಂಧಿತ ವರದಿಗಳು ಉತ್ತಮವಾಗಿವೆ. ಹಾಗಾಗಿ, ಪ್ರತಿಭಟನೆಗೆ ತೆರಳಲು ಅನುಮತಿ ನೀಡುವಂತೆ ಕೋರಿದ್ಧಾರೆ.
23 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸೊನಮ್ ಅವರನ್ನು ದೆಹಲಿ ಪೊಲೀಸರು ಬಲವಂತವಾಗಿ ಆಸ್ಪತ್ರೆಗೆ ಕರೆದೊಯ್ದಿದ್ದರು.
'ನಾನು ಚೆನ್ನಾಗಿದ್ದೇನೆ. ನನ್ನ ಆರೋಗ್ಯ ಸಂಬಂಧಿತ ವರದಿಗಳೂ ಉತ್ತಮವಾಗಿವೆ. ಆಸ್ಪತ್ರೆಯಿಂದ ತೆರಳಲು ನನಗೆ ಅನುಮತಿ ನೀಡಬೇಕೆಂದು ನಿಮ್ಮಲ್ಲಿ ಮನವಿ ಮಾಡುತ್ತೇನೆ. ತಾತ್ಕಾಲಿಕ ಅನುಮತಿಯಾದರೂ ಕೊಡಿ. ಆಗ ನಾನು ಸಂಸತ್ ಚಲೊ ಪ್ರತಿಭಟನೆಯಲ್ಲಿ ಭಾಗವಹಿಸಬಹುದು' ಎಂದಿದ್ದಾರೆ.
ಪೊಲೀಸರು ನನ್ನನ್ನು ಬಂಧಿಸಿಲ್ಲ ಎಂದು ಹೇಳುತ್ತಿದ್ದಾರೆ. ಹಾಗಾದರೆ, ನನ್ನ ಚಲನವಲನವನ್ನು ಏಕೆ ನಿರ್ಬಂಧಿಸಲಾಗಿದೆ ಎಂದು ಅವರು ಎಕ್ಸ್ ಪೋಸ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.
ಭಾನುವಾರ ಬರೆದಿದ್ದ ಮತ್ತೊಂದು ಪತ್ರದಲ್ಲಿ ಅವರು, ಸೋಮವಾರ ಸಂಸತ್ ಭವನದ ಕಡೆಗಿನ ಪ್ರತಿಭಟನಾ ಮೆರವಣಿಗೆಯನ್ನು ಭಾರತದ ಎರಡನೇ ಸ್ವಾತಂತ್ರ್ಯ ಸಂಗ್ರಾಮ ಎಂದು ಬಣ್ಣಿಸಿದ್ದರು.
ಅಲ್ಲದೆ, ಭಯದಿಂದ ಮುಕ್ತಿ ಮತ್ತು ಅನ್ಯಾಯದಿಂದ ಮುಕ್ತಿಗೆ ಕರೆ ನೀಡಿದ್ದ ಅವರು, ಈ ಚಳವಳಿಯನ್ನು ಯಶಸ್ವಿಗೊಳಿಸುವಂತೆ ಬೆಂಬಲಿಗರಿಗೆ ಮನವಿ ಮಾಡಿದ್ದರು.
ಸಫ್ದರ್‌ಜಂಗ್ ಆಸ್ಪತ್ರೆಯಿಂದ ತಮ್ಮ ಪತ್ನಿ ಗೀತಾಂಜಲಿ ಅವರ ಮೂಲಕ ಹಂಚಿಕೊಂಡ ಕೈಬರಹದ ಸಂದೇಶದಲ್ಲಿ ವಾಂಗ್ಚೂಕ್, ಅನ್ಯಾಯದಿಂದ ಮುಕ್ತಿ ಎಂಬುದನ್ನು ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪಗಳಿಗೆ ಸಂಬಂಧಿಸಿ ಹಾಗೂ ಭಯದಿಂದ ಮುಕ್ತಿ ಎಂಬುದನ್ನು ತಮ್ಮ ಅಕ್ರಮ ಬಂಧನಕ್ಕೆ ಸಂಬಂಧಿಸಿ ವಿವರಿಸಿದ್ದಾರೆ.

