ಕಾಸರಗೋಡು: ಬಹುತೇಕ ಯಕ್ಷಗಾನ ಪ್ರಸಂಗಗಳು ಮಹಾಕಾವ್ಯದ ಯೋಗ್ಯತೆಯನ್ನು ಹೊಂದಿದ್ದು, ಯಕ್ಷಗಾನದ ಗೌರವ ಹೆಚ್ಚಲು ಕಾರಣವಾಗಿರುವುದಾಗಿ ಹಿರಿಯ ಪ್ರಸಂಗಕರ್ತ, ಸಂಶೋಧಕ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್ ಅವರು ಹೇಳಿದರು.
ಅವರು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನದ ಶ್ರೀ ಕೇಶವಾನಂದ ಭಾರತೀ ಸ್ಮೃತಿ ಮಂದಿರದಲ್ಲಿ ಆಯೋಜಿಸಲಾಗಿದ್ದ ಯಕ್ಷಗಾನ ಪ್ರಸಂಗ ರಚನೆ ಕಮ್ಮಟ ಹಾಗೂ ಶ್ರೀಧರ ಡಿ.ಎಸ್ ಅವರ ವೀರ ತಪಸ್ವಿ ಪರಶುರಾಮ ಕಾದಂಬರಿ ಆಧಾರಿತ ಕಾಸರಗೋಡಿನ ಹಿರಿಯ ಪ್ರಸಂಗಕರ್ತ ಶೇಡಿಗುಮ್ಮೆ ವಾಸುದೇವ ಭಟ್ ರಚಿಸಿದ 'ವೀರ ತಪಸ್ವಿ ಪರಶುರಾಮ' ಯಕ್ಷಗಾನ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಯಕ್ಷಗಾನ ಕಾವ್ಯ ಸೌಂದರ್ಯವನ್ನು ಪ್ರಕಟಿಸುವ, ಪ್ರಚಾರಪಡಿಸುವ ಕೆಲಸ ನಡೆಯಬೇಕಾದ ಅನಿವಾರ್ಯತೆಯಿದೆ. ಬಹುತೇಕಮಂದಿ ರಂಗಸ್ಥಳದಲ್ಲಿ ಕಾಣುವ ಯಕ್ಷಗಾನ ವೀಕ್ಷಣೆಗೆ ತಮ್ಮ ಅನುಭವವನ್ನು ಸೀಮಿತಗೊಳಿಸುತ್ತಿದ್ದು, ಯಕ್ಷಗಾನ ಕಾವ್ಯವನ್ನು ಓದುವ ಮೂಲಕ ರಸೋತ್ಪಾದನೆಯ ಹೊಸ ಅನುಭವ ಪಡೆಯಲು ಸಾಧ್ಯ ಎಂದು ತಿಳಿಸಿದರು.ಶೇಡಿಗುಮ್ಮೆ ವಾಸುದೇವ ಭಟ್ ರಚಿಸಿದ 'ವೀರ ತಪಸ್ವಿ ಪರಶುರಾಮ' ಯಕ್ಷಗಾನ ಕೃತಿ ಶಬ್ದ ಮತ್ತು ಅರ್ಥ ಎರಡು ಸಮನ್ವಯಗೊಳಿಸಿದ ಶ್ರೇಷ್ಠ ಕಾವ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹಿರಿಯ ಪ್ರಸಂಗಕರ್ತ ಶ್ರೀಧರ ಡಿ.ಎಸ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಶೇಡಿಗುಮ್ಮೆ ವಾಸುದೇವ ಭಟ್ ಅವರು ಯಕ್ಷಗಾನ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಮೂಲ್ಯವಾಗಿದೆ. ಬಿಡುಗಡೆಯಾಗಿರುವ ಹೊಸ ಕೃತಿಯು ಕೂಡ ಅತ್ಯಂತ ಸುಂದರವಾದ ಪದ್ಯಗಳನ್ನು ಹೊಂದಿದ್ದು, ಅವರ ಸಾಧನೆಯನ್ನು ಯಕ್ಷಗಾನ ಅಕಾಡೆಮಿ ಗಮನಿಸಬೇಕು. ವರ್ತಮಾನದ ಅತ್ಯಂತ ಶ್ರೇಷ್ಠ ಯಕ್ಷಗಾನ ಕವಿ 'ಪಾರ್ತಿಸುಬ್ಬ ಪ್ರಶಸ್ತಿ' ಇವರಿಗೆ ಲಭಿಸುವಂತಾಗಲಿ ಎಂದು ಹಾರೈಸಿದರು.
ಶ್ರೀ ಧರ್ಮಸ್ಥಳ ಮೇಳದ ಪ್ರಬಂಧಕ ಗಿರೀಶ್ ಹೆಗ್ಡೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಚಂದ್ರಹಾಸ ಕಯ್ಯಾರ್ ಪ್ರಾರ್ಥಿಸಿದರು.ಕೃತಿ ಪ್ರಕಟಿಸಿದ ಫಣಿಗಿರಿ ಪ್ರತಿಷ್ಠಾನದ ಅಧ್ಯಕ್ಷ ಉಮೇಶ್ ಶಿರೂರು ಸ್ವಾಗತಿಸಿದರು. ಯೋಗೀಶ್ ರಾವ್ ಚಿಗುರುಪಾದೆ ಕಾರ್ಯಕ್ರಮ ನಿರೂಪಿಸಿದರು. ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಸಿರಿಬಾಗಿಲು ವಂದಿಸಿದರು.
ಕಾರ್ಯಕ್ರಮದ ಅಂಗವಾಗಿ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್ ಅವರ ಮಾರ್ಗದರ್ಶನದಲ್ಲಿ ದಿನಪೂರ್ತಿ ಯಕ್ಷಗಾನ ಪ್ರಸಂಗ ರಚನಾ ಕಮ್ಮಟ ನಡೆಯಿತು. ಯುವಪ್ರಸಂಗಕರ್ತರಾದ ದಿವಾಣ ದುರ್ಗಾಪ್ರಸಾದ್ ಭಟ್ ಕಟೀಲು, ಚಂದ್ರಹಾಸ ಕಯ್ಯಾರು, ಅಮೋಘ ಶಂಕರ ಉಜಿರೆ, ರಾಜಗೋಪಾಲ್ ಕನ್ಯಾನ, ಉಮೇಶ್ ಶಿರೂರು, ಯೋಗೀಶ್ ರಾವ್ ಚಿಗುರುಪಾದೆ, ದೀವಿತ್ ಪೆರಾಡಿ, ಶ್ರೀಮತಿ ಶುಭಾಶಯ, ಮಯೂರ ನಾಯ್ಗ, ಗಿರೀಶ ಹೆಗ್ಡೆ ಧರ್ಮಸ್ಥಳ, ವರ್ಧನ್ ಎಂ ಸುರತ್ಕಲ್‍ಉಪಸ್ಥಿತರಿದ್ದರು.



