ಪುರಿ: ಪುರಿ ಜಗನ್ನಾಥ, ಬಲಭದ್ರ, ಸುಭದ್ರಾ ಮೂರ್ತಿಗಳ ವಾರ್ಷಿಕ ರಥಯಾತ್ರೆಯ ಮೊದಲ ಹಂತ ಮುಕ್ತಾಯಗೊಂಡಿದ್ದು, ದೇವರ ದರ್ಶನ ಪಡೆಯಲು ಭಕ್ತರು ಗುಂಡಿಚಾ ದೇವಾಲಯಕ್ಕೆ ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ.
'ಅಡಾಪ ಬಿಜೆ' ಆಚರಣೆ ನೆರವೇರಿದ ಬಳಿಕ ಜಗನ್ನಾಥ, ಬಲಭದ್ರ ಮತ್ತು ಸುಭದ್ರ ದೇವರ ಜನ್ಮಸ್ಥಳವೆಂದು ಪರಿಗಣಿಸಲಾದ ಗುಂಡಿಚಾ ದೇವಾಲಯಕ್ಕೆ ಮೂರೂ ರಥಗಳನ್ನು ಶುಕ್ರವಾರ ಮಧ್ಯಾಹ್ನ ತರಲಾಗಿದ್ದು, ಸಂಪ್ರದಾಯದಂತೆ ವಿಗ್ರಹಗಳನ್ನು ರಾತ್ರಿಯಿಡೀ ರಥಗಳ ಮೇಲೆಯೇ ಇರಿಸಲಾಗಿತ್ತು.
ಜುಲೈ 24ರಂದು ನಡೆಯುವ 'ಬಹುದಾ ಯಾತ್ರೆ' ಬಳಿಕ ರಥಗಳನ್ನು ಜಗನ್ನಾಥ ದೇವಾಲಯಕ್ಕೆ ತರಲಾಗುವುದು. ಅಲ್ಲಿಯವರೆಗೆ ರಥಗಳು ಗುಂಡಿಚಾ ದೇವಾಲಯದಲ್ಲಿಯೇ ಇರಲಿವೆ. ಗುಂಡಿಚಾ ದೇವಾಲಯದ ಅಡಾಪ ಮಂಟಪದಲ್ಲಿ ಮೂರೂ ಮೂರ್ತಿಗಳನ್ನು ಇರಿಸಲಾಗಿದ್ದು, ಜಗನ್ನಾಥ ದೇವಾಲಯದಲ್ಲಿ ಪಡೆಯುವ ದರ್ಶನಕ್ಕಿಂತ ಗುಂಡಿಚಾ ದೇವಾಲಯದಲ್ಲಿನ ದರ್ಶನದಿಂದ ಹೆಚ್ಚಿನ ಅನುಗ್ರಹಕ್ಕೆ ಪಾತ್ರರಾಗಬಹುದು ಎಂಬ ನಂಬಿಕೆ ಜನರಲ್ಲಿ ಇದೆ.
ಭಾನುವಾರದಿಂದ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ. ಎಲ್ಲ ಭಕ್ತರಿಗೂ ಸುಗಮ ದರ್ಶನ ಒದಗಿಸುವ ಗುರಿ ಹೊಂದಿದ್ದು, ಆ ನಿಟ್ಟಿನಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ವಿಗ್ರಹಗಳ ಸ್ವಚ್ಛತೆ ಮತ್ತು ಅಲಂಕಾರದ ನಿಮಿತ್ತ ಭಾನುವಾರ ರಾತ್ರಿ 9ರಿಂದ ಸೋಮವಾರ ಬೆಳಿಗ್ಗೆ 3ರವರೆಗೆ ಗುಂಡಿಚಾ ದೇವಾಲಯ ಪ್ರವೇಶಕ್ಕೆ ಭಕ್ತರಿಗೆ ಅವಕಾಶವಿಲ್ಲ ಎಂದು ದೇವಾಲಯ ಆಡಳಿತ ತಿಳಿಸಿದೆ.

