ಕಾಸರಗೋಡು: ಉದರ ಸಂಬಂಧಿ ಕಾಯಿಲೆಗೆ ಸಂಬಂಧಿಸಿ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ನಾಲ್ಕನೇ ತರಗತಿ ವಿದ್ಯಾರ್ಥಿ ಮೃತಪಟ್ಟ ಪ್ರಕರಣದ ಸಮಗ್ರ ತನಿಖೆ ನಡೆಸುವಂತೆ ಡಿವೈಎಫ್‍ಐ ಕಾಸರಗೋಡು ಬ್ಲಾಕ್ ಸಮಿತಿಯಿಂದ ಜನರಲ್ ಆಸ್ಪತ್ರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು.
ಪ್ರತಿಭಟನಾಕಾರರನ್ನು ಪೊಲೀಸರು ತಡೆಯುತ್ತಿದ್ದಂತೆ ಪ್ರತಿಭಟನಾಕಾರರು ಆಸ್ಪತ್ರೆಗೆ ಮುನ್ನುಗ್ಗಲು ಯತ್ನಿಸಿದ್ದು, ಪೊಲೀಸರು ಲಾಟಿಪ್ರಹಾರ ನಡೆಸಿ ಚದುರಿಸಿದ್ದಾರೆ. ಬಾಲಕನ ಸಾವಿಗೆ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣವೆಂದು ಡಿವೈಎಫ್‍ಐ ಪ್ರತಿಭಟನೆ ಹಮ್ಮಿಕೊಂಡಿತ್ತು. ಹೊಸ ಬಸ್ ನಿಲ್ದಾಣ ವಠಾರದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಆಸ್ಪತ್ರೆ ಮುಖ್ಯ ದ್ವಾರದ ಬಳಿ ತಲುಪಿದಾಗ ಪೊಲೀಸರು ತಡೆಹಿಡಿದಿದ್ದರು.
ಪ್ರತಿಭಟನೆಯನ್ನು ಡಿವೈಎಫ್‍ಐ ರಾಜ್ಯ ಸಹ ಕಾರ್ಯದರ್ಶಿ ರಜೀಶ್ ವೆಳ್ಳಾಟ್ ಉದ್ಘಾಟಿಸಿದರು. ಮುಖಂಡರಾದ ಎಂ. ವಿ. ರತೀಶ್, ಸುಭಾಷ್ ಪಾಡಿ, ಸಾದಿಕ್ ಚೆರುಗೋಳಿ, ಎನ್. ಗಿರೀಶ್ ಮೊದಲಾದವರು ನೇತೃತ್ವ ನೀಡಿದರು.
ಉದರ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಬೇಡಡ್ಕ ನಿವಾಸಿ ಅಶ್ರಫ್-ಬುಷ್ರಾ ದಂಪತಿಯ ಪುತ್ರ ಒಂಭತ್ತರ ಹರೆಯದ ಬಾಲಕ ಮಹಮ್ಮದ್ ಇಯಾಸ್ ಶಸ್ತ್ರಚಿಕಿತ್ಸೆ ನಂತರ ಮೃತಪಟ್ಟಿದ್ದನು.



