ಕಾಸರಗೋಡು: ನಗರದ ನೆಲ್ಲಿಕುಂಜೆ ಲೈಟ್ ಹೌಸ್ ಬಳಿಯ ಸಮುದ್ರ ದಡದಲ್ಲಿ ಪತ್ತೆಯಾಗಿರುವ ರುಂಡವಿಲ್ಲದ ಮೃತದೇಹ ಆಸ್ಪತ್ರೆಯೊಂದರಲ್ಲಿ ಶವಮಹಜರು ನಡೆಸಲಾದ ಮೃತದೇಹವೆಂದು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆಸಲಾದ ಶವಮಹಜರು ವರದಿ ತಿಳಿಸಿದೆ. ಮರಣೋತ್ತರ ಪರೀಕ್ಷೆ ನಡೆಸಿದ ಸಂದರ್ಭ ಮೃತದೇಹದ ಎದೆ ಭಾಗ, ಹೊಟ್ಟೆಗೆ ಇರಿತದ ಗಾಯಗಳುಂಟಾಗಿದ್ದು, ಇದಕ್ಕೆ ಹೊಲಿಗೆ ಹಾಕಿರುವ ಮಾಹಿತಿ ಬೆಳಕಿಗೆ ಬಂದಿದೆ. ಮೃತದೇಹ ಕಡಲು ಸೇರಿರುವುದು ನಿಗೂಢತೆಗೆ ಕಾರಣವಾಗಿದೆ. ಮಂಗಳೂರು ಆಸುಪಾಸು ಮೃತದೇಹ ಸಮುದ್ರ ಸೇರಿರಬೇಕೆಂದು ಸಂಶಯಿಸಲಾಗಿದೆ. ಪುರುಷ ಮೃತದೇಹವೆಂದು ಗುರುತಿಸಿರುವುದ ಬಿಟ್ಟರೆ, ವಯಸ್ಸು ದೃಢೀಕರಿಸಲು ಸಾಧ್ಯವಾಗಿಲ್ಲ. ಒಂದು ತಿಂಗಳ ಹಿಂದೆ ಸಾವು ಸಂಭವಿಸಿರಬೇಕೆಂದು ಸಂಶಯಿಸಲಾಗಿದೆ. ಮೃತದೇಹದ ಗುರುತು ಪತ್ತೆಹಚ್ಚುವ ನಿಟ್ಟಿನಲ್ಲಿ ಡಿಎನ್‍ಎ ತಪಾಸಣೆ ನಡೆಸುವುದರ ಜತೆಗೆ ತನಿಖೆಯನ್ನು ಕರ್ನಾಟಕಕ್ಕೆ ವಿಸ್ತರಿಸಲು ಪೊಲೀಸರು ತೀರ್ಮಾನಿಸಿದ್ದಾರೆ. ಜುಲೈ 11 ರಂದು ಕಾಸರಗೋಡು ನೆಲ್ಲಿಕುಂಜೆ ಕಸಬ ಕಡಪ್ಪುರ ಸಮುದ್ರ ದಡದಲ್ಲಿ ರುಂಡವಿಲ್ಲದ ಮೃತದೇಹ ಪತ್ತೆಯಾಗಿತ್ತು.

