ಪೆರ್ಲ: ಲೋಕಸೇವಾ ಆಯೋಗ ನಡೆಸುತ್ತಿರುವ ಪರೀಕ್ಷೆಗಳಲ್ಲಿ ಪೂರ್ವತಯಾರಿಯೊಂದಿಗೆ ಭಾಗವಹಿಸಿದಲ್ಲಿ ಯಶಸ್ಸು ಸಾಧ್ಯ ಎಂಬುದಾಗಿ ಕಾಸರಗೋಡು ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ(ಎಡಿಎಂ) ಉದಯಕುಮಾರ್ ಪೆರ್ಲ ತಿಳಿಸಿದ್ದಾರೆ.
ಅವರು ಪೆರ್ಲ ಶ್ರೀಸತ್ಯನಾರಾಯಣ ಪ್ರೌಶಾಲಾ ಗ್ರಂಥಾಲಯ ಸಭಾಂಗಣದಲ್ಲಿ ಯೋಜಿಸಲಾಗಿದ್ದ ಶ್ರೀ ಸತ್ಯನಾರಾಯಣ ವಿದ್ಯಾಸಂಸ್ಥೆಗಳ ಸಂಸ್ಥಾಪಕ ಪರ್ತಜೆ ವೆಂಕಟ್ರಮಣ ಭಟ್ ಸಂಸ್ಮರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕಾಸರಗೋಡಿನ ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಬಲ್ಲ ಅಧಿಕಾರಿಗಳ ಸಂಖ್ಯೆ ಕುಸಿಯುತ್ತಿದ್ದು, ಇದನ್ನು ಹೋಗಲಾಡಿಸಲು ಪಿಎಸ್‍ಸಿ ಮೂಲಕ ನಡೆಸುವ ಪರೀಕ್ಷೆಗಳಲ್ಲಿ ನಿರಂತರ ತೊಡಗಿಸಿಕೊಳ್ಳಲು ವಿದ್ಯಾರ್ಥಿಗಳು ಮುಂದಾಗಬೇಕು ಎಂದು ಕಿವಿಮತು ಹೇಳಿದರು.
ಶ್ರೀ ವಿದ್ಯಾರಣ್ಯ ವಿದ್ಯಾವರ್ಧಕ ಸಂಘದ ಅಧ್ಯಕ್ಷ ವಿಶ್ವೇಶ್ವರ ಭಟ್ ಕಾರ್ಯಾಡು ಅಧ್ಯಕ್ಷತೆ ವಹಿಸಿದ್ದರು. ಶಾಲೆ ಹಳೇ ವಿದ್ಯಾರ್ಥಿ, ನಿವೃತ್ತ ಬ್ಯಾಂಕ್ ಅಧಿಕಾರಿ ವಿನೋಬ ಶೆಟ್ಟಿ ದಂಬೆಕಾನ ಸಂಸ್ಮರಣಾ ಭಾಷಣ ಮಾಡಿ, ಶತಮಾನದ ಹಿಂದೆ ಕುಗ್ರಾಮದಲ್ಲಿ ಸುಸಜ್ಜಿತ ವಿದ್ಯಾಸಂಸ್ಥೆಯನ್ನು ಕಟ್ಟಿ ಬೆಳೆಸಿದ ಪರ್ತಜೆ ವೆಂಕಟ್ರಮಣ ಭಟ್ ಅವರ ದೂರದರ್ಶಿತ್ವದಿಂದ ಪೆರ್ಲ ವಿದ್ಯಾಸಂಸ್ಥೆ ಇಂದು ಪ್ರಸಿದ್ಧಿಗೆ ಕಾರಣವಾಗಿದೆ ಎಂದು ತಿಳಿಸಿದರು.
ಶಾಲಾ ಆಡಳಿತ ಮಂಡಳಿ ಪ್ರಬಂಧಕರ ಪರವಾಗಿ ಡಾ. ಪ್ರಸನ್ನ ಮಿತ್ರ, ಪ್ರೌಡಶಾಲಾ ಮುಖ್ಯ ಶಿಕ್ಷಕ ಎನ್.ಕೇಶವ ಪ್ರಕಾಶ್, ಕಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸಂಧ್ಯಾ ಟೀಚರ್, ಆಡಳಿತ ಮಂಡಳಿ ಪದಾಧಿPಕಾರಿಗಳು, ಹಳೇ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಈ ಸಂದರ್ಭ ದತ್ತಿನಿಧಿ ಬಹುಮಾನ ವಿತರಿಸಲಾಯಿತು. ಶಾಲೆಗೆ ಫ್ಯಾನ್ ಕೊಡುಗೆಯಾಗಿ ನೀಡಿದ ದಾನಿಗಳನ್ನು ಗೌರವಿಸಲಾಯಿತು.
ಶಾಲಾ ಹಳೇ ವಿದ್ಯಾರ್ಥಿ, ಎಡಿಎಂ ಆಗಿ ಬಡ್ತಿಗೊಂಡ ಉದಯಕುಮಾರ್ ಪೆರ್ಲ ಅವರನ್ನು ಶಾಲೆ ವತಿಯಿಂದ ಗೌರವಿಸಲಾಯಿತು. ಕಾರ್ಯಕ್ರಮಕ್ಕೂ ಮೊದಲು ಪರ್ತಜೆ ವೆಂಕಟ್ರಮಣ ಭಟ್ ಅವರ ಪ್ರತಿಮೆಗೆ ವಿನೋದ ಶೆಟ್ಟಿ ದಂಬೆಕ್ಕಾನ ಹಾರಾರ್ಪಣೆ ನಡೆಸಿದರು. ಪ್ರಭಾರ ಮುಖ್ಯ ಶಿಕ್ಷಕ ವೇಣುಗೋಪಾಲ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಸ್ಟಾಫ್ ಸೆಕ್ರೆಟರಿ ಎಸ್. ಕೃಷ್ಣಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಕೃಷ್ಣರಾಜ್ ವಂದಿಸಿದರು.



