ಕಾಸರಗೋಡು: ನಗರದ ನುಳ್ಳಿಪ್ಪಾಡಿಯ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.), ಕನ್ನಡ ಭವನ ಪ್ರಕಾಶನ ಹಾಗೂ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ ಸಂಯುಕ್ತ ಆಶ್ರಯದಲ್ಲಿ ಜು. 26ರಂದು ನಡೆಯಲಿರುವ "ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನದ ಅಂಗವಾಗಿ ಸಮ್ಮೇಳನದ ಪ್ರಚಾರ ಕಾರ್ಯಕ್ಕೆ ಎಡನೀರು ಶ್ರೀಗಳು ಬ್ಯಾನರ್ ಬಿಡುಗಡೆ ಮಾಡುವ ಮೂಲಕ ಚಾಲನೆ ನೀಡಿದರು.
ಶ್ರೀಮಠದಲ್ಲಿ ನಡೆದ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಕಾಸರಗೋಡು ಬೌಗೋಳಿಕವಾಗಿ ಕೇರಳದಲ್ಲಿದ್ದರೂ ನಮ್ಮ ಬದುಕು, ಸಂಸ್ಕøತಿ ಮತ್ತು ಭಾಷೆಯಲ್ಲಿ ಕನ್ನಡದ ಅಸ್ತಿತ್ವವನ್ನು ಉಳಿಸಿಕೊಳ್ಳುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದೆ. ಕನ್ನಡದ ರಕ್ಷಣೆ ಹಾಗೂ ಬೆಳವಣಿಗೆಗಾಗಿ ಸಂಘ-ಸಂಸ್ಥೆಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು. ಪ್ರತಿಯೊಂದಕ್ಕೂ ಸರ್ಕಾರದ ನೆರವನ್ನೇ ಅವಲಂಬಿಸದೆ ಸ್ವಾವಲಂಬನೆಯ ಮನೋಭಾವ ಬೆಳೆಸಿಕೊಳ್ಳಬೇಕು. ಕನ್ನಡ ಭವನವು ನಿರಂತರವಾಗಿ ಕನ್ನಡಪರ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಗಡಿನಾಡಿನ ಕನ್ನಡಿಗರನ್ನು ಒಗ್ಗೂಡಿಸುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಸಮ್ಮೇಳನ ಸಮಿತಿ ಅಧ್ಯಕ್ಷ ಡಾ. ವೆಂಕಟ್ರಮಣ ಹೊಳ್ಳ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಸರ್ಕಾರದ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್. ಸುಬ್ಬಯ್ಯ ಕಟ್ಟೆ ಹಾಗೂ ಸಾಹಿತಿ ಶ್ರೀಹರಿ ಭಟ್ ಪೆಲ್ತಾಜೆ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಕನ್ನಡ ಭವನದ ಸ್ಥಾಪಕ ಅಧ್ಯಕ್ಷ ಡಾ. ವಾಮನ್ ರಾವ್ ಬೇಕಲ್ ಹಾಗೂ ಸಂಧ್ಯಾ ರಾಣಿ ದಂಪತಿ ಎಡನೀರು ಶ್ರೀಗಳಿಗೆ ತುಳಸಿ ಹಾರ ಸಮರ್ಪಿಸಿ ಫಲ-ಪುಷ್ಪ ಕಾಣಿಕೆ ನೀಡಿ ಆಶೀರ್ವಾದ ಪಡೆದರು.
ಕಾರ್ಯಕ್ರಮದಲ್ಲಿ ಅಶೋಕ್ ಚಂದ್ರಗಿ (ಬೆಳಗಾವಿ), ಬಲರಾಮ್ ಬೆಳಗಾವಿ, ಪತ್ರಕರ್ತ ಜಗನ್ನಾಥ್ ಶೆಟ್ಟಿ, ವಸಂತ್ ಕೆರೆಮನೆ, ಹಾಗೂ ಎಡನೀರು ಶ್ರೀಮಠದ ವ್ಯವಸ್ಥಾಪಕ ರಾಜೇಂದ್ರ ಕಲ್ಲೂರಾಯ ಉಪಸ್ಥಿತರಿದ್ದರು.



