ಕಾಸರಗೋಡು: ಎಡನೀರು ಮಠಾಧೀಶ ಶ್ರೀ ಸಚ್ಛಿದಾನಂದ ಭಾರತಿ ಶ್ರೀಪಾದಂಗಳವರ ಆರನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆ ಜುಲೈ 29 ರಿಂದ ಶ್ರೀಮಠದಲ್ಲಿ ಆರಂಭಗೊಳ್ಳಲಿದ್ದು, ವ್ರತಾಚರಣೆ ಪೂರ್ವಭಾವಿಯಾಗಿ ತಮ್ಮ ದೀಕ್ಷಾಗುರು ಕಾಂಚಿ ಕಾಮಕೋಟಿ ಪೀಠಾಧೀಶ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಮಹಾಸ್ವಾಮಿಗಳವರನ್ನು ಭೇಟಿಯಾದರು. ಇದಕ್ಕೂ ಮೊದಲು ಶ್ರೀಗಳು ಕಾಂಚಿ ಶ್ರೀ ಕಾಮಾಕ್ಷಿ ಅಮ್ಮನ ದರ್ಶನ ನಡೆಸಿದರು. ದೀರ್ಘ ಸಮಯದ ನಂತರ ಗುರು-ಶಿಷ್ಯ ಸಮಾಗಮವಾಗುತ್ತಿದ್ದು, ಸಮಕಾಲೀನ ಸಾಮಾಜಿಕ ಬೆಳವಣಿಗೆಗಳಲ್ಲಿ ಆಚಾರ್ಯರು ಮತ್ತು ಶ್ರೀಮಠದ ಪಾತ್ರಗಳ ಬಗ್ಗೆ ಸಮಾಲೋಚನೆ ನಡೆಸಿದರು.
ಕೇರಳದಲ್ಲಿ ಹಿಂದೂ ಸಮಾಜ ಎದುರಿಸುತ್ತಿರುವ ಅಭದ್ರತೆ ನೀಗಿಸಲು ಎಲ್ಲಾ ಜನಾಂಗಕ್ಕೂ ಸಮಾನ ಅವಕಾಶ ಸೇರಿದಂತೆ ಸಾಮಾಜಿಕ ಸಂರಕ್ಷಣೆ ದೊರೆಯುವ ಚಟುವಟಿಕೆಗಳು ಧಾರ್ಮಿಕ ಕೇಂದ್ರಗಳ ಮೂಲಕ ನಡೆಯಬೇಕು. ಇದಕ್ಕೆ ಧರ್ಮ ಪೀಠಗಳು ಮತ್ತು ಆಚಾರ್ಯವರ್ಗದವರು ನೇತೃತ್ವ ವಹಿಸುವ ಕೆಲಸ ನಡೆದುಬರಬೇಕು ಎಂದು ಕಾಂಚಿಶ್ರೀಗಳು ಉಪದೇಶಿಸಿದರು. ಪ್ರತಿ ಮನೆಯೂ ಆಚಾರಾನುಷ್ಠಾನ ಪಾಲಿಸುವ ತಾಣಗಳಾಗಿ ಪುನ: ಸಂಘಟಿತಗೊಳ್ಳುವ ಮೂಲಕ ಉತ್ಥಾನದತ್ತ ಸಮಾಜ ಸಾಗಬೇಕಾದ ಅನಿವಾರ್ಯತೆಯಿದೆ. ಇದಕ್ಕಾಗಿ ಮಠ, ಮಂದಿರ, ದೇವಾಲಯಗಳ ಸಹಿತ ಆಚಾರ್ಯ ಪರಂಪರೆ ಕೆಲಸ ಮಾಡಬೇಕೆಂದು ಶ್ರೀಗಳವರು ತಿಳಿಸಿದರು.
ಚಾತುರ್ಮಾಸ್ಯ ವ್ರತಾಚರಣೆಯ ನಂತರ ಕೇರಳಪ್ರವಾಸ ಕೈಗೊಳ್ಳುವ ಸಂದರ್ಭ ಎಡನೀರು ಮಠದಲ್ಲಿ ಮೊಕ್ಕಾಂ ಹೂಡುವ ಬಗ್ಗೆ ಕಾಂಚಿ ಶ್ರೀಗಳು ಸೂಚನೆ ನೀಡಿದರು.

.jpg)
.jpg)
