ರಾಯಪುರ: ಇ20 ಪೆಟ್ರೋಲ್ ಬಳಕೆಗೆ ಸಂಬಂಧಿಸಿದ ತಾಂತ್ರಿಕ ದೋಷದ ಕುರಿತು ದಾಖಲಾದ ಮಹತ್ವದ ಪ್ರಕರಣದಲ್ಲಿ ರಾಯಪುರ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗವು ವಾಹನ ಮಾಲೀಕರ ಪರವಾಗಿ ತೀರ್ಪು ನೀಡಿದೆ. ಪದೇ ಪದೇ ತಾಂತ್ರಿಕ ದೋಷ ಕಾಣಿಸಿಕೊಂಡ ಗ್ರ್ಯಾಂಡ್ ವಿಟಾರಾ ಸ್ಟ್ರಾಂಗ್ ಹೈಬ್ರಿಡ್ ಎಸ್‌ಯುವಿಯನ್ನು 45 ದಿನಗಳೊಳಗೆ ಹೊಸ ಇ20-ಹೊಂದಾಣಿಕೆಯ ಮಾದರಿಯೊಂದಿಗೆ ಬದಲಾಯಿಸುವಂತೆ ಮಾರುತಿ ಸುಝುಕಿ ಇಂಡಿಯಾ ಲಿಮಿಟೆಡ್ ಹಾಗೂ ಡೀಲರ್‌ಗೆ ಆಯೋಗ ಆದೇಶಿಸಿದೆ.
ನಿಗದಿತ ಅವಧಿಯಲ್ಲಿ ವಾಹನ ಬದಲಾಯಿಸದಿದ್ದರೆ ವಾಹನದ ಬೆಲೆ, ಆರ್‌ಟಿಒ ನೋಂದಣಿ ಶುಲ್ಕ ಹಾಗೂ ವಿಮಾ ಪ್ರೀಮಿಯಂ ಸೇರಿ ಒಟ್ಟು 20.50 ಲಕ್ಷ ರೂ.ಗಳನ್ನು ಗ್ರಾಹಕರಿಗೆ ಮರುಪಾವತಿಸಬೇಕು ಎಂದು ನಿರ್ದೇಶಿಸಿದೆ.
ಇದು ಕೇಂದ್ರ ಸರ್ಕಾರದ ಎಥೆನಾಲ್ ಮಿಶ್ರಿತ ಪೆಟ್ರೋಲ್ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ ದಾಖಲಾದ ಮೊದಲ ಗ್ರಾಹಕ ನ್ಯಾಯಾಲಯದ ಆದೇಶ ಎಂದು ಹೇಳಲಾಗುತ್ತಿದೆ.
ಈ ಪ್ರಕರಣವನ್ನು ರಾಯಪುರದ ನಿವಾಸಿ ಡಾ. ಪ್ರೇಮ್‌ರಾಜ್ ದೇಬ್ಟಾ ದಾಖಲಿಸಿದ್ದರು. ಅವರು ಜೂನ್ 2024ರಲ್ಲಿ ಗ್ರ್ಯಾಂಡ್ ವಿಟಾರಾ ಸ್ಟ್ರಾಂಗ್ ಹೈಬ್ರಿಡ್ ಜೀಟಾ+ ಮಾದರಿಯ ಎಸ್‌ಯುವಿಯನ್ನು ಖರೀದಿಸಿದ್ದರು. ಆದರೆ ಆ ವಾಹನವು ಜನವರಿ 2023ರಲ್ಲಿ ತಯಾರಾಗಿದ್ದು, ಖರೀದಿಸಿದ ಐದು ತಿಂಗಳೊಳಗೆ ಪದೇ ಪದೇ ರಸ್ತೆಯಲ್ಲೇ ಸ್ಥಗಿತಗೊಳ್ಳುವ ತಾಂತ್ರಿಕ ಸಮಸ್ಯೆ ಕಾಣಿಸಿಕೊಳ್ಳಲು ಆರಂಭಿಸಿತು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಸಮಸ್ಯೆ ಕಾಣಿಸಿಕೊಂಡ ಬಳಿಕ ವಾಹನವನ್ನು ಹಲವು ಬಾರಿ ಅಧಿಕೃತ ಸರ್ವಿಸ್ ಸೆಂಟರ್ ಗೆ ಕೊಂಡೊಯ್ಯಲಾಗಿತ್ತು. ಅಲ್ಲಿ ಇಂಧನ ಟ್ಯಾಂಕ್‌ನಲ್ಲಿ ಮಾಲಿನ್ಯವಿದೆ ಎಂದು ಹೇಳಿ ಅದನ್ನು ಸ್ವಚ್ಛಗೊಳಿಸಿ ವಾಹನವನ್ನು ಹಿಂದಿರುಗಿಸಲಾಗಿತ್ತು. ಆದರೆ ದುರಸ್ತಿಯ ಬಳಿಕವೂ ಅದೇ ಸಮಸ್ಯೆ ಮರುಕಳಿಸಿತು ಎಂದು ದೂರುದಾರರು ಆರೋಪಿಸಿದ್ದಾರೆ.
ಸರ್ಕಾರದಿಂದ ಮಾನ್ಯತೆ ಪಡೆದ ಪ್ರಯೋಗಾಲಯದಲ್ಲಿ ಇಂಧನದ ಮಾದರಿಯನ್ನು ಪರೀಕ್ಷಿಸಿದಾಗ ಬಿಳಿ ಬಣ್ಣದ, ಮೊಸರಿನಂತಹ ಪದಾರ್ಥ ಪತ್ತೆಯಾಗಿದ್ದು, ಅದನ್ನು ಎಥೆನಾಲ್ ಎಂದು ಗುರುತಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ವಾಹನವು ಇ20 ಪೆಟ್ರೋಲ್‌ಗೆ ಸಂಪೂರ್ಣ ಹೊಂದಾಣಿಕೆಯಾಗುವುದಿಲ್ಲ ಎಂಬ ವಿಷಯವನ್ನು ಖರೀದಿಯ ಸಂದರ್ಭದಲ್ಲಿ ತಮಗೆ ತಿಳಿಸಿರಲಿಲ್ಲ ಎಂದು ಡಾ. ದೇಬ್ಟಾ ವಾದಿಸಿದ್ದಾರೆ.
ಪ್ರಕರಣದ ವಿಚಾರಣೆ ನಡೆಸಿದ ಆಯೋಗವು ಎರಡೂ ಪಕ್ಷಗಳ ವಾದಗಳನ್ನು ಆಲಿಸಿ ದಾಖಲೆಗಳನ್ನು ಪರಿಶೀಲಿಸಿದ ಬಳಿಕ, ಹಲವು ಬಾರಿ ದುರಸ್ತಿ ಮಾಡಿದರೂ ವಾಹನದಲ್ಲಿನ ದೋಷವನ್ನು ನಿವಾರಿಸಲು ಸಾಧ್ಯವಾಗಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಸರ್ವಿಸ್ ಸೆಂಟರ್ ಗೆ ಪದೇ ಪದೇ ಕೊಂಡೊಯ್ದ ಬಳಿಕವೂ ಅದೇ ಸಮಸ್ಯೆ ಮುಂದುವರಿದಿರುವುದು ಗ್ರಾಹಕರ ದೂರಿಗೆ ಬಲ ನೀಡುತ್ತದೆ ಎಂದು ಹೇಳಿದೆ.
ದೇಶದ ಬಹುತೇಕ ಪೆಟ್ರೋಲ್ ಬಂಕ್‌ಗಳಲ್ಲಿ ಇ20 ಪೆಟ್ರೋಲ್ ಸಾಮಾನ್ಯವಾಗಿ ಲಭ್ಯವಿರುವ ಇಂಧನವಾಗಿದ್ದು, ಗ್ರಾಹಕರಿಗೆ ಬೇರೆ ಪ್ರಾಯೋಗಿಕ ಪರ್ಯಾಯಗಳು ಸೀಮಿತವಾಗಿವೆ ಎಂಬ ಅಂಶವನ್ನೂ ಆಯೋಗ ಉಲ್ಲೇಖಿಸಿದೆ. ಪರ್ಯಾಯ ಇಂಧನ ಲಭ್ಯವಿಲ್ಲದ ಸಂದರ್ಭದಲ್ಲಿ ಇ20 ಪೆಟ್ರೋಲ್ ಬಳಸಬಾರದು ಎಂದು ವಾಹನ ಚಾಲಕರಿಂದ ನಿರೀಕ್ಷಿಸುವುದು ಸಮಂಜಸವಲ್ಲ ಎಂದು ಆಯೋಗ ಅಭಿಪ್ರಾಯಪಟ್ಟಿದೆ.
ವಾಹನವು ಇ20 ಪೆಟ್ರೋಲ್‌ಗೆ ಸಂಪೂರ್ಣ ಹೊಂದಾಣಿಕೆಯಾಗಿದೆ ಹಾಗೂ ಕಂಡುಬಂದ ದೋಷಗಳು ಸಾಮಾನ್ಯ ಬಳಕೆ, ನಿರ್ವಹಣೆ ಅಥವಾ ಇತರ ಕಾರಣಗಳಿಂದ ಉಂಟಾಗಿವೆ ಎಂದು ಮಾರುತಿ ಸುಝುಕಿ ಮತ್ತು ಡೀಲರ್ ವಾದಿಸಿದ್ದರು. ಆದರೆ ಈ ವಾದವನ್ನು ಆಯೋಗ ತಿರಸ್ಕರಿಸಿದೆ.
ಆಯೋಗವು 45 ದಿನಗಳೊಳಗೆ ಹೊಸ ಇ20-ಹೊಂದಾಣಿಕೆಯ ವಾಹನವನ್ನು ಗ್ರಾಹಕರಿಗೆ ಒದಗಿಸುವಂತೆ ಆದೇಶಿಸಿದೆ. ಹಾಗೆ ಮಾಡಲು ವಿಫಲವಾದರೆ ವಾಹನದ ಬೆಲೆ, ಆರ್‌ಟಿಒ ನೋಂದಣಿ ಶುಲ್ಕ ಮತ್ತು ವಿಮಾ ಪ್ರೀಮಿಯಂ ಸೇರಿ ಒಟ್ಟು 20.50 ಲಕ್ಷ ರೂ.ಗಳನ್ನು ಮರುಪಾವತಿಸಬೇಕು ಎಂದು ನಿರ್ದೇಶಿಸಿದೆ.
ಇದಲ್ಲದೆ, ಮಾನಸಿಕ ಹಿಂಸೆ ಮತ್ತು ತೊಂದರೆಗೆ ಪರಿಹಾರವಾಗಿ 1 ಲಕ್ಷ ರೂ. ಹಾಗೂ ಮೊಕದ್ದಮೆ ವೆಚ್ಚಕ್ಕಾಗಿ 10,000 ರೂ.ಗಳನ್ನು ಪಾವತಿಸುವಂತೆ ಆಯೋಗ ಸೂಚಿಸಿದೆ. ನಿಗದಿತ 45 ದಿನಗಳೊಳಗೆ ಈ ಮೊತ್ತವನ್ನು ಪಾವತಿಸದಿದ್ದರೆ ಕಾನೂನುಬದ್ಧ ಬಡ್ಡಿಯೂ ಅನ್ವಯವಾಗಲಿದೆ.
ಸರ್ಕಾರವು ನಿಗದಿತ ಅವಧಿಗಿಂತ ಮುಂಚಿತವಾಗಿಯೇ ಶೇಕಡಾ 20 ರಷ್ಟು ಎಥೆನಾಲ್ ಮಿಶ್ರಣದ ಗುರಿಯನ್ನು ಸಾಧಿಸಿದೆ ಮತ್ತು ಇ10 ಇಂಧನಕ್ಕೆ ಹೊಂದಿಕೊಳ್ಳುವ ಎಲ್ಲಾ ಪೆಟ್ರೋಲ್ ವಾಹನಗಳು ಇ20 ಇಂಧನದಲ್ಲೂ ಸುರಕ್ಷಿತವಾಗಿ ಚಲಿಸಬಲ್ಲವು ಎಂದು ಸರ್ಕಾರ ಹೇಳುತ್ತಿದೆ. ಆದರೆ ಪೆಟ್ರೋಲ್ ಗಿಂತ ಎಥೆನಾಲ್ ಕಡಿಮೆ ಶಕ್ತಿ ಸಾಮರ್ಥ್ಯವನ್ನು ಹೊಂದಿರುವುದರಿಂದ ಮೈಲೇಜ್ ಕಡಿಮೆಯಾಗುತ್ತಿರುವ ಬಗ್ಗೆ ಕೆಲವು ಚಾಲಕರು ಕಳವಳ ವ್ಯಕ್ತಪಡಿಸುತ್ತಿರುವುದು ವರದಿಯಾಗುತ್ತಿದೆ.

