HEALTH TIPS

RTI ಕಾರ್ಯಕರ್ತನಾಗಿದ್ದ ಸಿಜೆಪಿ ವಕ್ತಾರ: ಸೌರವ್ ದಾಸ್ ಯಾರು? ಹಿನ್ನೆಲೆ ಏನು?

 ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್ ಮಂತರ್‌ನಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆ ವೇಳೆ ಗಮನಸೆಳೆದ ಪ್ರಮುಖರ ಪೈಕಿ 'ಸೌರವ್ ದಾಸ್' ಕೂಡಾ ಒಬ್ಬರು.

ಮೂಲತಃ ತನಿಖಾ ಪತ್ರಕರ್ತರಾಗಿರುವ ಸೌರವ್ ದಾಸ್, 18ನೇ ವಯಸ್ಸಿನಲ್ಲೇ ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಮೂಲಕ ಸರ್ಕಾರದ ಲೋಪದೋಷಗಳನ್ನು ಬಯಲಿಗೆಳೆದಿದ್ದರು.

ಪ್ರಸ್ತುತ ಕಾಕ್ರೋಚ್ ಜನತಾ ಪಾರ್ಟಿಯ ಮುಖ್ಯ ವಕ್ತಾರರಾಗಿ ವಿದ್ಯಾರ್ಥಿ ಸಂಘಟನೆಗಳನ್ನು ಮುನ್ನಡೆಸುತ್ತಿದ್ದಾರೆ.

ದಾಸ್ ಹಿನ್ನೆಲೆ ಏನು?

ತನಿಖಾ ಪತ್ರಕರ್ತರಾಗಿರುವ ದೆಹಲಿ ಮೂಲದ ಸೌರವ್ ದಾಸ್ ಅವರು ಕಾನೂನು, ಆಡಳಿತ, ನ್ಯಾಯಾಂಗ, ಪಾರದರ್ಶಕತೆ ಮತ್ತು ಅಪರಾಧ ವರದಿಗಾರಿಕೆಯ ಮೂಲಕ ಗುರುತಿಸಿಕೊಂಡಿದ್ದಾರೆ.

ಹವಾಮಾನ ಸಂಬಂಧಿತ ಸಮಸ್ಯೆಗಳ ಮೇಲೆ ಗಮನಹರಿಸುವ 'ಕ್ಲೈಮೇಟ್ ಆಯಕ್ಷನ್ ಫ್ರಂಟ್'ನ ಸಹ-ಸಂಸ್ಥಾಪಕರೂ ಹೌದು.

ತನಿಖಾ ಪತ್ರಕರ್ತರಾಗಿದ್ದ ಸಂದರ್ಭದಲ್ಲಿ ಎದುರಾದ ತೊಡಕುಗಳನ್ನು ಸವಾಲಾಗಿ ಸ್ವೀಕರಿಸಲು ಅವರು ಕಾನೂನು ಮಾರ್ಗಗಳನ್ನು ಬಳಸಿಕೊಂಡಿದ್ದು ಉಂಟು.

ಅಮಿಟಿ ವಿವಿಯಲ್ಲಿ ವ್ಯಾಸಂಗ...

ಅಮಿಟಿ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಸೌರವ್ ದಾಸ್ ಅವರು ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ತನಿಖಾ ಪತ್ರಿಕೋದ್ಯಮದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ಸೌರವ್ ಅವರು 18ನೇ ವಯಸ್ಸಿನಲ್ಲಿ ಸಾರ್ವಜನಿಕ ಪ್ರಾಧಿಕಾರಗಳಿಂದ ಮಾಹಿತಿ ಪಡೆಯಲು ಮತ್ತು ಸಾರ್ವಜನಿಕ ಹಿತಾಸಕ್ತಿಯ ವಿಷಯಗಳನ್ನು ತನಿಖೆ ಮಾಡಲು ಮಾಹಿತಿ ಹಕ್ಕು ಕಾಯ್ದೆಯನ್ನು (ಆರ್‌ಟಿಐ) ಪರಿಣಾಮಕಾರಿಯಾಗಿ ಬಳಸಲು ಆರಂಭಿಸಿದ್ದರು.

2020ರಲ್ಲಿ ಸೌರವ್ ಅವರು ತನಿಖಾ ಪತ್ರಕರ್ತರಾಗಿ ವೃತ್ತಿ ಆರಂಭಿಸಿದರು. ಆರ್‌ಟಿಐ ಆಧಾರಿತ ವರದಿಗಳು ಹಲವು ಸಮಸ್ಯೆಗಳತ್ತ ಬೆಳಕು ಚೆಲ್ಲಿದವು.

'ದಿ ಹಿಂದೂ', 'ಅಲ್ ಜಝೀರಾ', 'ದಿ ಕ್ಯಾರವಾನ್', 'ನ್ಯೂ ಲೈನ್ಸ್ ಮ್ಯಾಗಜೀನ್', 'ದಿ ವೈರ್'ನಂತಹ ಪ್ರಮುಖ ನಿಯತಕಾಲಿಕೆಗಳಿಗೆ ಅವರು ಲೇಖನಗಳನ್ನು ಬರೆದಿದ್ದಾರೆ.

ಕೋವಿಡ್-19 ಸಮಯದಲ್ಲಿ ಆರ್‌ಟಿಐ ಅರ್ಜಿಗಳ ವಿಳಂಬ ಪ್ರಶ್ನಿಸಿ ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಈ ಕಾನೂನು ಕ್ರಮವು ಕೇಂದ್ರ ಮಾಹಿತಿ ಆಯೋಗ (ಸಿಐಸಿ) ತುರ್ತು ಕೋವಿಡ್ ಸಂಬಂಧಿತ ಮಾಹಿತಿ ಅರ್ಜಿಗಳನ್ನು ವಿಲೇವಾರಿ ಮಾಡುವ ಪ್ರಕ್ರಿಯೆಯನ್ನು ವೇಗಗೊಳಿಸಲು ಕಾರಣವಾಯಿತು ಎಂದು ಸೌರವ್ ಹೇಳಿಕೊಂಡಿದ್ದಾರೆ.

ಪತ್ರಿಕೋದ್ಯಮದ ಹೊರತಾಗಿ, ದಾಸ್ ಅವರು ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ವಿಷಯಗಳ ಕುರಿತು ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು (ಪಿಐಎಲ್‌) ಸಲ್ಲಿಸಿದ್ದಾರೆ.

ಸಿಜೆಪಿ ಪ್ರತಿಭಟನೆ...

ಕಾಕ್ರೋಚ್ ಜನತಾ ಪಾರ್ಟಿಯೊಂದಿಗೆ ಗುರುತಿಸಿಕೊಂಡ ನಂತರ ಸೌರವ್ ದಾಸ್ ಅವರು ಸಾರ್ವಜನಿಕವಾಗಿ ಗಮನ ಸೆಳೆದಿದ್ದಾರೆ.

ದೆಹಲಿಯ ಜಂತರ್ ಮಂತರ್‌ನಲ್ಲಿ 'ಸಿಜೆಪಿ' ನಡೆಸಿದ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳ ಸಮಸ್ಯೆಗಳು, ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಸರ್ಕಾರದ ಹೊಣೆಗಾರಿಕೆಗೆ ಸಂಬಂಧಿಸಿದ ವಿಷಯಗಳನ್ನು ಎತ್ತಿಹಿಡಿಯುವ ಮೂಲಕ ದಾಸ್ ಪ್ರಮುಖ ಪಾತ್ರವಹಿಸಿದ್ದರು.

ವಿದ್ಯಾರ್ಥಿ ಚಳವಳಿಯ ವಕ್ತಾರರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ದಾಸ್, ಮಾಧ್ಯಮ ಸಂವಾದ ಮತ್ತು ಸಾರ್ವಜನಿಕ ಚರ್ಚೆಗಳಲ್ಲಿ ಸಿಜೆಪಿಯನ್ನು ಪ್ರತಿನಿಧಿಸಿದ್ದಾರೆ. ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರನ್ನು ಭೇಟಿಯಾದ ನಿಯೋಗದ ಭಾಗವಾಗಿಯೂ ಅವರು ಇದ್ದರು.

ಚಳವಳಿಯ ಪ್ರಮುಖ ವಕ್ತಾರರಾಗಿ, ದಾಸ್ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ್ದರು ಮತ್ತು ಪ್ರತಿಭಟನೆಯ ವೇಳೆ ಸಿಜೆಪಿಯ ಬೇಡಿಕೆಗಳ ಕುರಿತು ಧ್ವನಿ ಎತ್ತಿದ್ದರು.

ಬರಹಗಾರರಾಗಿ 'ಸೌರವ್ ದಾಸ್'

ಸೌರವ್ ದಾಸ್ ಅವರು ತಮ್ಮ ಚೊಚ್ಚಲ ಪುಸ್ತಕ 'ಕಂಪ್ಲಿಸಿಟ್ ಸೈಲೆನ್ಸ್: ದಿ ಕೋರ್ಟ್ಸ್ ರೋಲ್ ಇನ್ ಇಂಡಿಯಾಸ್ ಕ್ವೈಟ್ ಸಫರಿಂಗ್' (Complicit Silence: The Court's Role in India's Quiet Suffering) ಕುರಿತು ಬರೆವಣಿಗೆಯಲ್ಲಿ ತೊಡಗಿದ್ದಾರೆ.

ನ್ಯಾಯಕ್ಕಾಗಿ ಕೋರ್ಟ್‌ ಮೆಟ್ಟಿಲೇರಿದ ಸಂತ್ರಸ್ತರ ಅನುಭವ, ಕಾನೂನು ಪರಿಹಾರ, ನ್ಯಾಯಾಂಗ ಮತ್ತು ಸಾಂಸ್ಥಿಕ ಹೊಣೆಗಾರಿಕೆಯನ್ನು ಈ ಪುಸ್ತಕ ಒಳಗೊಂಡಿದೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries