ಚೆನ್ನೈ: ತಮಿಳುನಾಡಿನ ಆಡಳಿತಾರೂಢ ಟಿವಿಕೆ ಸರ್ಕಾರವನ್ನು ಅಸ್ಥಿರಗೊಳಿಸಲು ಶಾಸಕರಿಗೆ ₹35 ಕೋಟಿ ಲಂಚದ ಆಮಿಷ ಒಡ್ಡಿದ ಆರೋಪ ಪ್ರಕರಣದಲ್ಲಿ ಬಂಧನದ ಭೀತಿಯಲ್ಲಿದ್ದ ಡಿಎಂಕೆ ನಾಯಕ ವಿ.ಸೆಂಥಿಲ್ ಬಾಲಾಜಿ ಮತ್ತು ಅವರ ಸಹೋದರ ವಿ.ಅಶೋಕ್ ಕುಮಾರ್ ಅವರಿಗೆ ಮದ್ರಾಸ್ ಹೈಕೋರ್ಟ್ ಬುಧವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
'ಪ್ರಕರಣ ಸಂಬಂಧ ತನಿಖೆಗೆ ಸಹಕರಿಸಬೇಕು ಮತ್ತು ಟ್ರಿಪ್ಲಿಕೇನ್ ಪೊಲೀಸ್ ಠಾಣೆಗೆ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಹಾಜರಾಗಬೇಕು' ಎಂಬ ಷರತ್ತಿನ ಮೇಲೆ ನ್ಯಾಯಮೂರ್ತಿ ಜಿ. ಕೆ. ಇಳಂತಿರೈಯನ್ ಅವರು ಸೆಂಥಿಲ್ ಬಾಲಾಜಿ ಮತ್ತು ಅಶೋಕ್ ಕುಮಾರ್ ಅವರಿಗೆ ಜಾಮೀನು ಮಂಜೂರು ಮಾಡಿದ್ದಾರೆ.
ಸೆಂಥಿಲ್ ಬಾಲಾಜಿ ಪರ ಹಿರಿಯ ವಕೀಲ ಎನ್. ಆರ್. ಇಳಂಗೊ ಹಾಜರಿದ್ದರು. ಅರ್ಜಿದಾರರು ಸರ್ಕಾರವನ್ನು ಉರುಳಿಸಲು ಬಯಸಿದ್ದರು ಎಂಬುದು ಕೇವಲ ಒಂದು ಊಹೆಯಷ್ಟೆ. ಸ್ಪೀಕರ್ ನೇಮಕಕ್ಕೆ ಯಾರೂ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ ಎಂದು ವಾದಿಸಿದ್ದಾರೆ.
ಕರೂರು ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದ್ದು, ಅರ್ಜಿದಾರರು ತಮ್ಮ ಪಕ್ಷಕ್ಕಾಗಿ ಕೆಲಸ ಮಾಡುವುದನ್ನು ತಡೆಯುವ ಉದ್ದೇಶದಿಂದಲೇ ಅವರ ವಿರುದ್ಧ ಈ ಆರೋಪಗಳನ್ನು ಮಾಡಲಾಗಿದೆ. ಪ್ರಕರಣ ಸಂಬಂಧ ಯಾವುದೇ ಹಣದ ವಹಿವಾಟು ನಡೆದಿಲ್ಲ. ಅರ್ಜಿದಾರರು ಚುನಾಯಿತ ಪ್ರತಿನಿಧಿಯಾಗಿದ್ದು, ತನಿಖೆಗೆ ಸಂಪೂರ್ಣ ಸಹಕಾರ ನೀಡಲಿದ್ದಾರೆ ಎಂದು ಇಳಂಗೊ ಹೇಳಿದ್ದಾರೆ.
ಅಶೋಕ್ ಕುಮಾರ್ ಪರ ಹಾಜರಾದ ಹಿರಿಯ ವಕೀಲ ಪಿ. ಕುಮರೇಶನ್, ಟಿವಿಕೆ ಸರ್ಕಾರವನ್ನು ಉರುಳಿಸುವ ಪ್ರಶ್ನೆಯೇ ಇರಲಿಲ್ಲ ಎಂದಿದ್ದಾರೆ. ಡಿಎಂಕೆ ಕೇವಲ 59 ಶಾಸಕರನ್ನು ಹೊಂದಿದೆ. ಒಂದು ವೇಳೆ ಅವಿಶ್ವಾಸ ನಿರ್ಣಯವು ಸ್ಪೀಕರ್ ವಿರುದ್ಧವಾಗಿ ಹೋದರೂ, ಟಿವಿಕೆ 107 ಶಾಸಕರನ್ನು ಹೊಂದಿದೆ. ಮಂತ್ರಿಗಳಾಗಿರುವ 35 ಶಾಸಕರನ್ನು ಹೊರತುಪಡಿಸಿ, ಉಳಿದವರಲ್ಲಿ ಯಾರಾದರೂ ಸ್ಪೀಕರ್ ಆಗಬಹುದು ಎಂದು ವಿವರಿಸಿದ್ದಾರೆ.
ಜಾಮೀನು ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿದ ಪಬ್ಲಿಕ್ ಪ್ರಾಸಿಕ್ಯೂಟರ್ ಜಾನ್ ಸತ್ಯನ್, ಟಿವಿಕೆ ಸರ್ಕಾರ ಅಸ್ಥಿರಗೊಳಿಸುವ ಪಿತೂರಿಯ ಭಾಗವಾಗಿ ಟಿವಿಕೆ ಶಾಸಕರಿಗೆ ₹35 ಕೋಟಿ ಆಮಿಷ ಒಡ್ಡಲಾಗಿತ್ತು ಎಂದಿದ್ದಾರೆ.
ಜುಲೈ 1ರಂದು ರಾಜಕೀಯ ತಂತ್ರಜ್ಞ ತಿರುನಾವುಕ್ಕರಸು, ತಿರುಚ್ಚಿಯ ನರೇಶ್ ಮತ್ತು ಚೆನ್ನೈನ ವೇದವಕ್ಕಂನ ತ್ಯಾಗರಾಜನ್ ಅವರನ್ನು ಪೊಲೀಸರು ಬಂಧಿಸಿದ್ದರು.
ಬಾಲಾಜಿ ಮತ್ತು ಕುಮಾರ್ ಅವರ ಸಲಹೆಯಂತೆ ಶಾಸಕ ಇಳಯರಾಜ ಅವರನ್ನು ಸಂಪರ್ಕಿಸಿದ್ದ ತಿರುನಾವುಕ್ಕರಸು ಅವರು, ಸಭಾಧ್ಯಕ್ಷ ಜೆ.ಸಿ.ಡಿ. ಪ್ರಭಾಕರ್ ಅವರ ವಿರುದ್ಧ ಡಿಎಂಕೆ ತರಲು ಯೋಜಿಸುತ್ತಿರುವ ಅವಿಶ್ವಾಸ ನಿರ್ಣಯವನ್ನು ಬೆಂಬಲಿಸಲು ₹35 ಕೋಟಿ ಆಮಿಷವೊಡ್ಡಿದ್ದರು ಎಂದು ಆರೋಪಿಸಲಾಗಿದೆ.

