ನವದೆಹಲಿ: ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ಆರಂಭವಾಗಿ ಹತ್ತು ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ 'ಯುಪಿಐ'ಯನ್ನು ಭಾರತದ ಡಿಜಿಟಲ್ ಪಾವತಿ ಕ್ಷೇತ್ರದ ಮಹತ್ವದ ಮೈಲಿಗಲ್ಲು ಎಂದು ಬಣ್ಣಿಸಿದ್ದಾರೆ. ಯುಪಿಐ ಸಾಧಿಸಿರುವ ಜನಪ್ರಿಯತೆ ಬಗ್ಗೆ ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಪಡಬೇಕು ಎಂದು ಅವರು ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, 'ಒಂದು ದಶಕದ ಹಿಂದೆ ಯುಪಿಐ ಅನ್ನು ಪರಿಚಯಿಸಲಾಗಿತ್ತು. ಇದು ಭಾರತದ ಡಿಜಿಟಲ್ ಪಾವತಿ ಪ್ರಯಾಣಕ್ಕೆ ಹೊಸ ದಿಕ್ಕು ನೀಡಿದ ಮಹತ್ವದ ಹೆಜ್ಜೆಯಾಗಿದೆ' ಎಂದು ಹೇಳಿದ್ದಾರೆ.
ಯುಪಿಐ ಬಳಕೆ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಳ್ಳುವಂತೆಯೂ ಪ್ರಧಾನಿ ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮೇಲ್ವಿಚಾರಣೆಯಲ್ಲಿ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) 2016ರ ಆಗಸ್ಟ್ 25ರಂದು ಯುಪಿಐ ಸೇವೆಯನ್ನು ಆರಂಭಿಸಿತ್ತು. ಕಳೆದ ಹತ್ತು ವರ್ಷಗಳಲ್ಲಿ ಇದು ದೇಶದ ಡಿಜಿಟಲ್ ಪಾವತಿ ವ್ಯವಸ್ಥೆಯ ಬೆನ್ನೆಲುಬಾಗಿ ರೂಪುಗೊಂಡಿದ್ದು, ಆರ್ಥಿಕ ಬೆಳವಣಿಗೆಯನ್ನು ವಿಸ್ತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಕಳೆದ ಒಂದು ದಶಕದಲ್ಲಿ ಯುಪಿಐ ದೇಶದಲ್ಲಿ ಅಸಾಧಾರಣ ಬೆಳವಣಿಗೆಯನ್ನು ದಾಖಲಿಸಿದೆ. 2016-17ರಲ್ಲಿ ಕೇವಲ 1.78 ಕೋಟಿ ವಹಿವಾಟುಗಳು ನಡೆದಿದ್ದರೆ, 2025-26ರಲ್ಲಿ 24,162 ಕೋಟಿಗೂ ಅಧಿಕ ವಹಿವಾಟು ನಡೆದಿದೆ. ಇದು ವಹಿವಾಟಿನ ಸಂಖ್ಯೆಯಲ್ಲಿ 13 ಸಾವಿರ ಪಟ್ಟು ಏರಿಕೆ ಕಂಡಿರುವುದನ್ನು ತೋರಿಸುತ್ತದೆ.
ವಹಿವಾಟಿನ ಮೌಲ್ಯದಲ್ಲೂ ಇದೇ ರೀತಿಯ ಗಮನಾರ್ಹ ಏರಿಕೆ ಕಂಡುಬಂದಿದೆ. 2016-17ರಲ್ಲಿ ₹0.07 ಲಕ್ಷ ಕೋಟಿ ಮೌಲ್ಯದ ವಹಿವಾಟು ನಡೆದಿದ್ದರೆ, 2025-26ರಲ್ಲಿ ಅಂದಾಜು ₹314 ಲಕ್ಷ ಕೋಟಿಗೆ ತಲುಪಿದೆ. ಅಂದರೆ, ವಹಿವಾಟಿನ ಮೌಲ್ಯದಲ್ಲಿ 4 ಸಾವಿರ ಪಟ್ಟು ಹೆಚ್ಚು ಏರಿಕೆ ದಾಖಲಾಗಿದೆ.

