ದೀರ್ ಅಲ್ ಬಲಾಹ್ : ಗಾಜಾ ಮೇಲೆ 2023ರ ನವೆಂಬರ್‌ನಲ್ಲಿ ಇಸ್ರೇಲ್ ನಡೆಸಿದ ಭೀಕರ ದಾಳಿಯಲ್ಲಿ ಮೃತಪಟ್ಟಿದ್ದ 300ಕ್ಕೂ ಹೆಚ್ಚು ಜನರ ಪೈಕಿ ಪತ್ತೆಯಾದ 100ಕ್ಕೂ ಹೆಚ್ಚು ಮೃತದೇಹಗಳ ಸಾಮೂಹಿಕ ಅಂತ್ಯಸಂಸ್ಕಾರ ಮಂಗಳವಾರ ನಡೆಯಿತು. ಅಪಾರ ಪ್ರಮಾಣದಲ್ಲಿ ಪ್ಯಾಲೆಸ್ಟೀನಿಯರು ಪಾಲ್ಗೊಂಡಿದ್ದರು.
ಹಮಾಸ್ ವಿರುದ್ಧ ಹಲವು ವಾರಗಳವರೆಗೆ ನಡೆದಿದ್ದ ಯುದ್ಧದಲ್ಲಿ ಗಾಜಾದ ಸಬ್ರಾ ನಗರದ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿತ್ತು. 300ಕ್ಕೂ ಹೆಚ್ಚು ಮಂದಿ ಮೃತಪಟ್ಟರೂ, 40 ಶವಗಳು ಮಾತ್ರ ಪತ್ತೆಯಾಗಿದ್ದವು.
ಇತ್ತೀಚೆಗೆ ಏರ್ಪಟ್ಟಿದ್ದ ಕದನ ವಿರಾಮದ ವೇಳೆ ಶವಗಳಿಗೆ ಶೋಧ ಮಾಡಲಾಗಿತ್ತು. ಅವಶೇಷಗಳ ಅಡಿಯಲ್ಲಿ ನಡೆದ ಶೋಧದಲ್ಲಿ 40 ಮಕ್ಕಳು ಸೇರಿ 112 ಮಂದಿಯ ಮೃತದೇಹ ಪತ್ತೆಯಾಗಿವೆ. ಇನ್ನೂ 157 ಮಂದಿ ಮೃತದೇಹಗಳು ಪತ್ತೆಯಾಗಿಲ್ಲ ಎಂದು ಹಮಾಸ್‌ನ ಆಂತರಿಕ ಸಚಿವಾಲಯ ತಿಳಿಸಿದೆ.
ಕದನ ವಿರಾಮ ಯುದ್ಧ ಸಂಘರ್ಷವನ್ನು ನಿಲ್ಲಿಸಿತ್ತಾದರೂ ಅದು ಕಾರ್ಯರೂಪಕ್ಕೆ ಬರುವ ವೇಳೆಗೆ 1252 ಮಂದಿ ಹತ್ಯೆಯಾಗಿದ್ದರು ಎಂದು ಗಾಜಾದ ಆರೋಗ್ಯ ಇಲಾಖೆ ತಿಳಿಸಿದೆ.

