ಕಾಸರಗೋಡು: 'ದಕ್ಷಿಣ ಕಾಶಿ' ಎಂದೇ ಪ್ರಸಿದ್ಧಿಪಡೆದಿರುವ ತ್ರಿಕ್ಕನ್ನಾಡ್ ಶ್ರೀ ತ್ರಯಂಬಕೇಶ್ವರ ದೇವಾಲಯದಲ್ಲಿ, ಕರ್ಕಾಟಕ ಅಮವಾಸ್ಯೆ ಅಂಗವಾಗಿ ಪಿತೃ ತರ್ಪಣ ಕಾರ್ಯಕ್ರಮ ಆ. 12ರಂದು ಜರುಗಲಿದ್ದು, ದೇವಾಲಯದ ಆಡಳಿತ ಸಮಿತಿಯು ವ್ಯಾಪಕ ಸಿದ್ಧತೆ ನಡೆಸಿರುವುದಾಗಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಟಿ.ಸಿ. ಕೃಷ್ಣವರ್ಮ ರಾಜಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಅಂದು 'ಉಷಾ ಪೂಜೆ'ಯ ನಂತರ, 5.30ಕ್ಕೆ ದೇವಾಲಯದ ದಕ್ಷಿಣ ಭಾಗದಲ್ಲಿ ವಿಶೇಷವಾಗಿ ನಿರ್ಮಿಸಲಾದ ಚಪ್ಪರದಲ್ಲಿ ಪಿತೃತರ್ಪಣ ವಿಧಿವಿಧಾನಗಳು ನಡೆಯಲಿವೆ. ಮುಖ್ಯ ಅರ್ಚಕ ಬ್ರಹ್ಮಶ್ರೀ ನವೀನ್‍ಚಂದ್ರ ಕಾಯರ್ತಾಯ ಅವರ ನೇತೃತ್ವ ಹಾಗೂ ದೇವಾಲಯದ ಅರ್ಚಕ ಶ್ರೀ ರಾಜೇಂದ್ರ ಅರಳಿತ್ತಾಯ ಅವರ ಪೌರೋಹಿತ್ಯದಲ್ಲಿ ಈ ಕಾರ್ಯಕ್ರಮಗಳು ನಡೆಯಲಿದ್ದು, ಇಪ್ಪತ್ತು ಮಂದಿ ಅರ್ಚಕರು ಏಕಕಾಲದಲ್ಲಿ ವಿಧಿವಿಧಾನಗಳನ್ನು ನೆರವೇರಿಸಲಿದ್ದಾರೆ.
ಮುಂಗಡ ಪಾವತಿ ಜತೆಗೆ, ದೇವಾಲಯದ ವೆಬ್‍ಸೈಟ್ www.trikkannadtemple.in ಮೂಲಕ ಆನ್‍ಲೈನ್‍ನಲ್ಲಿ ರಸೀದಿ ಪಡೆಯಲು ವ್ಯವಸ್ಥೆ ಮಾಡಲಾಗಿದೆ. ದೇವಾಲಯಕ್ಕೆ ಭೇಟಿ ನೀಡುವ ಎಲ್ಲಾ ಭಕ್ತರಿಗೆ ಕುಡಿಯುವ ನೀರು ಮತ್ತು ಲಘು ಉಪಹಾರವನ್ನು ವಿತರಿಸಲು ಸಹ ವ್ಯವಸ್ಥೆ ಮಾಡಲಾಗಿದೆ.
ಬಲಿ ತರ್ಪಣಕ್ಕೆ ಆಗಮಿಸುವ ಭಕ್ತರಿಗೆ ನೆರವು ಒದಗಿಸುವ ನಿಟ್ಟಿನಲ್ಲಿ ಪೆÇಲೀಸ್, ಕರಾವಳಿ ಕಾವಲು ಪಡೆ ಮತ್ತು ಆರೋಗ್ಯ ಇಲಾಖೆಗಳ ಸೇವೆ ಲಭ್ಯವಿರಲಿದೆ. ಕಾಸರಗೋಡು-ಕಾಞಂಗಾಡು ರೂಟಲ್ಲಿ(ಚಂದ್ರಗಿರಿ ಸೇತುವೆ ಮೂಲಕ) ಹೆಚ್ಚಿನ ಬಸ್‍ಗಳೋಡಾಟಕ್ಕೆ ಕೆಎಸ್‍ಆರ್‍ಟಿಸಿ ಅಧಿಕಾರಿಗಳಿಗೆ ತಿಳಿಸಲಾಗಿದೆ.
ಬಿರುಸಿನ ಮಳೆ ಹಿನ್ನೆಲೆಯಲ್ಲಿ ಸಮುದ್ರ ಪ್ರಕ್ಷುಬ್ಧವಾಗಿರುವುದರಿಂದ, ಕಡಲತೀರಕ್ಕೆ ಭೇಟಿ ನೀಡುವಾಗ ಅತ್ಯಂತ ಎಚ್ಚರಿಕೆ ವಹಿಸುವಂತೆ ಭಕ್ತರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಟ್ರಸ್ಟಿ ಮಂಡಳಿಯ ಅಧ್ಯಕ್ಷ ವಲ್ಲಿಯೋಡನ್ ಬಾಲಕೃಷ್ಣನ್ ನಾಯರ್, ಪಾರಂಪರಿಕ ಟ್ರಸ್ಟಿ ಸದಸ್ಯರಾದ ಮೇಲತ್ ಸತ್ಯನಾಥನ್ ನಂಬಿಯಾರ್ ಮತ್ತು ಇದಯಿಲ್ಯಂ ಶ್ರೀವಲ್ಸನ್ ನಂಬಿಯಾರ್ ಭಾಗವಹಿಸಿದ್ದರು.


.webp)

