ನವದೆಹಲಿ: ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯು (ಎನ್‌ಸಿಎಲ್‌ಟಿ) ಜೀ ಗ್ರೂಪ್ ಸಂಸ್ಥಾಪಕ ಸುಭಾಷ್ಚಂದ್ರ ಅವರ ವೈಯಕ್ತಿಕ ಸಾಲ ಮರುಪಾವತಿ ಯೋಜನೆಯನ್ನು ಅನುಮೋದಿಸಿದ್ದು, 22,006.57 ಕೋಟಿ ರೂ.ಗಳ ಸಾಲಬಾಕಿಯ ಪೈಕಿ ಕೇವಲ 6.5 ಕೋಟಿ ರೂ.ಗಳನ್ನು (ಶೇ.0.03) ಪಾವತಿಸಿ ಪಾರಾಗಲು ಅವಕಾಶ ನೀಡಿದೆ ಎಂದು ವರದಿಯಾಗಿದೆ.
ಎನ್‌ಸಿಎಲ್‌ಟಿ ಅಂಗೀಕರಿಸಿರುವ ಸಾಲ ಮರುಪಾವತಿ ಯೋಜನೆಯಡಿ ಸಾಲಗಾರರಿಗೆ ಒಟ್ಟು 22,006.57 ಕೋಟಿ ರೂ.ಗಳ ಪೈಕಿ ಕೇವಲ 6.5 ಕೋಟಿ ರೂ.ಗಳನ್ನು ಪಾವತಿಸಲಾಗುತ್ತದೆ. ಸಾಲದ ಮೊತ್ತಕ್ಕೆ ಹೋಲಿಸಿದರೆ ಮರುಪಾವತಿಯು ಅತ್ಯಂತ ನಗಣ್ಯವಾಗಿದ್ದು, ಸಾಲಗಾರರಿಗೆ ಶೇ.99.97ರಷ್ಟು ಭಾರೀ ನಷ್ಟವುಂಟಾಗಲಿದೆ.
ಮೂಲ ಪೀಠದ ಇಬ್ಬರು ಸದಸ್ಯರ ನಡುವೆ ಭಿನ್ನಾಭಿಪ್ರಾದಿಂದಾಗಿ ತೀರ್ಪು ವಿಭಜನೆಗೊಂಡಿದ್ದರಿಂದ, ಎನ್‌ಸಿಎಲ್‌ಟಿ ಅಧ್ಯಕ್ಷರು ನಿಲೇಶ್ ಶರ್ಮಾರನ್ನು ಮೂರನೇ ಸದಸ್ಯರನ್ನಾಗಿ ನೇಮಿಸಿ ಅಂತಿಮ ತೀರ್ಪು ನೀಡುವಂತೆ ಸೂಚಿಸಿದ್ದರು. ಎಲ್‌ಐಸಿ ಹೌಸಿಂಗ್ ಫೈನಾನ್ಸ್ (ಎಲ್‌ಐಸಿಎಚ್‌ಎಫ್‌ಎಲ್) ನೇತೃತ್ವದಲ್ಲಿ ಕೆಲವು ಸಾಲಗಾರರು ಈ ಪ್ರಸ್ತಾವವು ಅಪ್ರಾಯೋಗಿಕ ಮತ್ತು ಕಾನೂನುಬಾಹಿರ ಎಂದು ತೀವ್ರವಾಗಿ ವಿರೋಧಿಸಿದ್ದು, ಆಕ್ಷೇಪಗಳನ್ನು ಶರ್ಮಾ ತಿರಸ್ಕರಿಸಿದ್ದಾರೆ ಎನ್ನಲಾಗಿದೆ. ಎಲ್‌ಐಸಿಎಚ್‌ಎಫ್‌ಎಲ್‌ಗೆ 1,322.39 ಕೋಟಿ ರೂ.ಗಳ ಸಾಲ ಬಾಕಿಯಿದ್ದು, ಪ್ರಸ್ತಾವಿತ ಸಾಲ ಮರುಪಾವತಿ ಯೋಜನೆಯಡಿ ಅದು ಕೇವಲ 38,09,294 ರೂ.ಗಳನ್ನು (ಕೇವಲ 0.028%) ಪಡೆಯಲಿದೆ.
ವಿರೋಧ ವ್ಯಕ್ತಪಡಿಸಿದ ಸಾಲಗಾರರು ಶೇ.20ಕ್ಕಿಂತ ಕಡಿಮೆ ಮತಗಳನ್ನು ಹೊಂದಿದ್ದರೆ, ಶೇ.80.81ರಷ್ಟು ಮತಗಳನ್ನು ಹೊಂದಿದ್ದ ಬಹುಪಾಲು ಸಾಲಗಾರರು ಈ ಮರುಪಾವತಿ ಯೋಜನೆಗೆ ತಮ್ಮ ಒಪ್ಪಿಗೆಯನ್ನು ಸೂಚಿಸಿದ್ದರು.
ಸುಭಾಷ್ಚಂದ್ರ ಅವರ ವೈಯಕ್ತಿಕ ಆಸ್ತಿಗಳ ಮೌಲ್ಯವು ಪ್ರಸ್ತಾವಿತ ಮರುಪಾವತಿ ಮೊತ್ತಕ್ಕಿಂತಲೂ ಕಡಿಮೆ ಇದೆ ಎಂದು ಪರಿಹಾರ ವೃತ್ತಿಪರರ ಮೌಲ್ಯಮಾಪನ ವರದಿಯಿಂದ ಸ್ಪಷ್ಟವಾಗಿದೆ ಎಂದು ನ್ಯಾಯಮಂಡಳಿ ತಿಳಿಸಿದೆ.
ಈ ಯೋಜನೆಯನ್ನು ತಿರಸ್ಕರಿಸಿದರೆ ಸುಭಾಷ್ಚಂದ್ರ ಅವರು ನೇರವಾಗಿ ದಿವಾಳಿತನಕ್ಕೆ ಒಳಗಾಗುತ್ತಾರೆ ಮತ್ತು ಇದರಿಂದ ಸಾಲಗಾರರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ,ಬದಲಿಗೆ ಮರುಪಾವತಿ ಸಾಧ್ಯತೆ ಮತ್ತಷ್ಟು ಕ್ಷೀಣಿಸುತ್ತದೆ ಎಂದು ನ್ಯಾಯಮಂಡಳಿ ಅಭಿಪ್ರಾಯಪಟ್ಟಿದೆ.
ಸಾಲಗಾರರ ಒಮ್ಮತದ ವಾಣಿಜ್ಯ ನಿರ್ಧಾರಗಳಲ್ಲಿ ನ್ಯಾಯಮಂಡಳಿಯು ತನ್ನ ಸ್ವಂತ ನಿರ್ಣಯವನ್ನು ಹೇರಲು ಬರುವುದಿಲ್ಲ ಹಾಗೂ ಇದರ ಪಾತ್ರವು ಕೇವಲ ಮೇಲ್ವಿಚಾರಣೆ ಮತ್ತು ನ್ಯಾಯಾಂಗ ಪರಿಶೀಲನೆಗೆ ಸೀಮಿತವಾಗಿದೆ ಎಂದು ಎನ್‌ಸಿಎಲ್‌ಟಿ ಸ್ಪಷ್ಟಪಡಿಸಿದೆ.
ದಿವಾಳಿತನ ಮತ್ತು ದಿವಾಳಿ ಸಂಹಿತೆಯ ಕಲಂ 115ರ ಪ್ರಕಾರ,ಒಮ್ಮೆ ಈ ಯೋಜನೆಗೆ ಅನುಮೋದನೆ ದೊರೆತರೆ,ಅದನ್ನು ವಿರೋಧಿಸಿದವರಿಗೂ ಸೇರಿದಂತೆ ಎಲ್ಲಾ ಸಾಲಗಾರರಿಗೂ ಇದು ಅನ್ವಯಿಸುತ್ತದೆ.
ಪ್ರಕರಣದ ಹಿನ್ನೆಲೆ:
ವಿವೇಕ್ ಇನ್‌ಫ್ರಾಕಾನ್ ಕಂಪನಿಗೆ ನೀಡಿದ್ದ 170 ಕೋಟಿ ರೂ.ಸಾಲಕ್ಕೆ ಸುಭಾಷ್ಚಂದ್ರ ಅವರು ವೈಯಕ್ತಿಕ ಖಾತರಿದಾರರಾಗಿದ್ದು, ಆ ಸಾಲ ಮರುಪಾವತಿಯಲ್ಲಿ ವ್ಯತ್ಯಯವಾದ ಕಾರಣ 2022ರಲ್ಲಿ ಇಂಡಿಯಾಬುಲ್ಸ್ ಹೌಸಿಂಗ್ ಫೈನಾನ್ಸ್ ಈ ದಿವಾಳಿತನ ಪ್ರಕ್ರಿಯೆಯನ್ನು ಆರಂಭಿಸಿತ್ತು.
ಈ ಸುದ್ದಿಯು ನಿಜವಾಗಿದ್ದರೆ ಸ್ನೇಹಿತ ಸುಭಾಷ್ಚಂದ್ರಗೆ ನನ್ನ ಅಭಿನಂದನೆಗಳು. 6203 ಕೋಟಿ ರೂ.ಗಳ ಜಡ್ಜ್‌ಮೆಂಟ್ ಸಾಲಕ್ಕೆ ಬದಲಾಗಿ ನನ್ನಿಂದ 14,100 ಕೋಟಿ ರೂ.ಗಳನ್ನು ವಸೂಲು ಮಾಡಿದ್ದನ್ನು ಬ್ಯಾಂಕುಗಳು ಮತ್ತು ಸರಕಾರ ಒಪ್ಪಿಕೊಂಡಿವೆ. ಇನ್ನೂ ಅನೇಕ ಸಾಲಗಾರರು ಅಲ್ಪ ಮೊತ್ತಕ್ಕೆ ತಮ್ಮ ಬಾಕಿ ವಿವಾದವನ್ನು ಇತ್ಯರ್ಥಗೊಳಿಸಿಕೊಂಡಿದ್ದಾರೆ. ಇದು ಭಾರತೀಯ ಸಾಲ ಪರಿಹಾರ ನ್ಯಾಯ! ಮಾಧ್ಯಮಗಳಿಂದ ಯಾವುದೇ ಪ್ರಶ್ನೆಗಳಿಲ್ಲ.
-ಉದ್ಯಮಿ ವಿಜಯ ಮಲ್ಯ

