ಕೋಲ್ಕತ್ತಾ: ಕೈಲಾಸ-ಮಾನಸ ಸರೋವರ ಯಾತ್ರೆಗೆ ತೆರಳಲು ಚೀನಾ ವೀಸಾ ನಿರಾಕರಣೆಯಾಗಿದ್ದರಿಂದ ಲಡಾಖ್ ಗೆ ಪ್ರವಾಸ ಕೈಗೊಂಡಿದ್ದ ಪಶ್ಚಿಮ ಬಂಗಾಳದ 61 ವರ್ಷದ ತಪತಿ ಸಿಂಘಾ ಅವರು ನೇಪಾಳದಲ್ಲಿ ಸಂಭವಿಸಿದ ದಿಢೀರ್ ಪ್ರವಾಹದಿಂದ ಪಾರಾಗಿದ್ದಾರೆ. ಆದರೆ, ತಪತಿ ಅವರು ಯಾತ್ರೆಗೆ ತೆರಳಬೇಕಿದ್ದ ಗುಂಪಿನ ಇತರ 32 ಪ್ರವಾಸಿಗರು ನೇಪಾಳದಲ್ಲಿ ನಾಪತ್ತೆಯಾಗಿದ್ದಾರೆ.
ನೇಪಾಳ-ಟಿಬೆಟ್ ಗಡಿ ಪ್ರದೇಶದಲ್ಲಿ ಬುಧವಾರ ಸಂಭವಿಸಿದ ದಿಢೀರ್ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ ಗುರುವಾರ 359ಕ್ಕೆ ಏರಿಕೆಯಾಗಿದೆ. ನಾಪತ್ತೆಯಾಗಿರುವವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಚೀನಾ ವೀಸಾ ಮಂಜೂರಾಗಿದ್ದರೆ ತಪತಿ ಸಿಂಘಾ ಅವರೂ ಮಾನಸ ಸರೋವರ ಯಾತ್ರೆಯ ಭಾಗವಾಗಿ ನೇಪಾಳಕ್ಕೆ ತೆರಳಿದ್ದ 33 ಮಂದಿಯ ಗುಂಪಿನಲ್ಲಿ ಇರುತ್ತಿದ್ದರು. ಆದರೆ, ವೀಸಾ ನಿರಾಕರಣೆಯಾದ ಬಳಿಕ ಅವರು ಲಡಾಖ್ ಗೆ ತೆರಳಲು ನಿರ್ಧರಿಸಿದ್ದರು. ಇದೀಗ ಪ್ರವಾಸವನ್ನು ಮೊಟಕುಗೊಳಿಸಿರುವ ಅವರು ಗುರುವಾರ ರಾತ್ರಿ ಕೋಲ್ಕತ್ತಾಗೆ ಮರಳುತ್ತಿದ್ದಾರೆ.
'ನಾನು ಈಗಾಗಲೇ ದಿಲ್ಲಿಗೆ ಬಂದಿಳಿದಿದ್ದು, ಸಂಜೆಯ ವೇಳೆಗೆ ಕೋಲ್ಕತ್ತಾ ವಿಮಾನ ನಿಲ್ದಾಣವನ್ನು ತಲುಪಲಿದ್ದೇನೆ' ಎಂದು ತಪತಿ ಸಿಂಘಾ ತಿಳಿಸಿದ್ದಾರೆ.
ಕೋಲ್ಕತ್ತಾ ಮೂಲದ ಟ್ರಾವೆಲ್ ಏಜೆನ್ಸಿಯೊಂದರ ಮೂಲಕ ತಪತಿ ಅವರು ಕೈಲಾಸ ಯಾತ್ರೆಯ 13 ದಿನಗಳ ಪ್ರವಾಸ ಯೋಜನೆಯನ್ನು ಮೇ ತಿಂಗಳಿನಿಂದಲೇ ರೂಪಿಸಿಕೊಂಡಿದ್ದರು. ಯಾತ್ರೆಗೆ ತೆರಳಲಿದ್ದ ಇತರ ಪ್ರವಾಸಿಗರೊಂದಿಗೆ ಪೂರ್ವಸಿದ್ಧತಾ ಸಭೆಗಳಲ್ಲಿ ಪಾಲ್ಗೊಂಡಿದ್ದರು. ಶಾಪಿಂಗ್ ಹಾಗೂ ಚಾರಣ ಅವಧಿಯಲ್ಲೂ ಭಾಗವಹಿಸಿದ್ದರು.
ಆದರೆ, ಯಾತ್ರೆಗೆ ತೆರಳುವ ಒಂದು ದಿನ ಮೊದಲು ಯಾವುದೇ ಕಾರಣವನ್ನು ಉಲ್ಲೇಖಿಸದೆ ಅವರ ಚೀನಾ ವೀಸಾವನ್ನು ತಿರಸ್ಕರಿಸಲಾಗಿದೆ ಎಂಬ ಮಾಹಿತಿ ದೊರೆತಿತ್ತು. ಇದರಿಂದ ಹತಾಶರಾದ ಅವರು ಕೈಲಾಸ ಯಾತ್ರೆಯ ಬದಲು ಲಡಾಖ್ ಪ್ರವಾಸ ಕೈಗೊಳ್ಳುವ ಯೋಜನೆ ರೂಪಿಸಿದ್ದರು.
'ವೀಸಾ ತಿರಸ್ಕಾರದಿಂದ ಖಿನ್ನಳಾಗಿದ್ದ ನನಗೆ ಈಗ ಬೇರೆಯದೇ ಅನುಭವವಾಗುತ್ತಿದೆ' ಎಂದು ಅವರು ಹೇಳಿದ್ದಾರೆ.
ನೇಪಾಳ ಮೂಲದ ಕೋಲ್ಕತ್ತಾ ಪ್ರವಾಸಿ ಏಜೆನ್ಸಿಯೊಂದು ಈ ಯಾತ್ರೆಯನ್ನು ಆಯೋಜಿಸಿತ್ತು. ನಾಪತ್ತೆಯಾಗಿರುವ 32 ಪ್ರವಾಸಿಗರನ್ನು ಸಂಪರ್ಕಿಸಲು ಏಜೆನ್ಸಿಗೆ ಈವರೆಗೆ ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ನಮ್ಮ ನಾಲ್ವರು ಅಧಿಕಾರಿಗಳು ಈಗಾಗಲೇ ನೇಪಾಳಕ್ಕೆ ತೆರಳಿದ್ದಾರೆ. ಗುರುವಾರ ಸಂಜೆಯ ವೇಳೆಗೆ ಒಂದಿಷ್ಟು ಮಾಹಿತಿ ದೊರೆಯುವ ಸಾಧ್ಯತೆ ಇದೆ' ಎಂದು ಪ್ರವಾಸಿ ಏಜೆನ್ಸಿ ತಿಳಿಸಿದೆ.
ನಾಪತ್ತೆಯಾಗಿರುವ ಪ್ರವಾಸಿಗರಿಗಾಗಿ ನೇಪಾಳದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದ್ದು, ಅವರ ಕುರಿತು ಯಾವುದೇ ಮಾಹಿತಿ ದೊರೆಯದಿರುವುದು ಕುಟುಂಬಸ್ಥರಲ್ಲಿ ಆತಂಕ ಮೂಡಿಸಿದೆ.

