ಚೆನ್ನೈ: ನಗರದ ಹೊರವಲಯದಲ್ಲಿರುವ ಪರಂದೂರಿನಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದ ಎರಡನೇ ವಿಮಾನ ನಿಲ್ದಾಣ ಯೋಜನೆಯನ್ನು ಕೈಬಿಡಲಾಗುವುದು ಎಂದು ಮುಖ್ಯಮಂತ್ರಿ ವಿಜಯ್ ನೇತೃತ್ವದ ಸರ್ಕಾರ ಘೋಷಿಸಿದೆ.
ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಸೋಮವಾರ ವಿಧಾನಸಭೆಯಲ್ಲಿ ಈ ಕುರಿತು ಪ್ರಕಟಣೆ ಹೊರಡಿಸಿದ್ದಾರೆ.
ಸಾರ್ವಜನಿಕರಿಂದ ಯಾವುದೇ ವಿರೋಧವಿಲ್ಲದ ಪ್ರದೇಶದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಈ ಕುರಿತು ಸರ್ಕಾರದ ಅಧಿಕೃತ ಪ್ರಕಟಣೆ ಹೊರಬೀಳುವ ಮುನ್ನವೇ, ಕಾಂಚೀಪುರಂ ಜಿಲ್ಲೆಯ ಪರಂದೂರಿನಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ಯೋಜನೆ ರದ್ದುಗೊಳಿಸಿದ್ದಕ್ಕಾಗಿ ವಿಜಯ್ ಅವರಿಗೆ ಧನ್ಯವಾದ ಅರ್ಪಿಸುವ ನಿರ್ಣಯವನ್ನು ಏಕನಾಪುರಂ ಗ್ರಾಮ ಪಂಚಾಯಿತಿ ಆಗಸ್ಟ್ 15ರಂದು ಅಂಗೀಕರಿಸಿತ್ತು.
ವಿಧಾನಸಭಾ ಚುನಾವಣೆಗೂ ಮುನ್ನ ಡಿಎಂಕೆ ಸರ್ಕಾರ ಮಹತ್ವಾಕಾಂಕ್ಷೆಯ ವಿಮಾನ ನಿಲ್ದಾಣ ಯೋಜನೆಯನ್ನು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷವು ತೀವ್ರವಾಗಿ ವಿರೋಧಿಸಿತ್ತು. ವಿಮಾನ ನಿಲ್ದಾಣ ವಿರೋಧಿಸಿ ವಿರುದ್ಧ ಏಕನಾಪುರಂ ಗ್ರಾಮ ಪಂಚಾಯಿತಿಯು 2022ರಿಂದಲೂ ನಿರ್ಣಯಗಳನ್ನು ಅಂಗೀಕರಿಸುತ್ತಾ ಬಂದಿತ್ತು.
ವಿಮಾನ ನಿಲ್ದಾಣ ಯೋಜನೆ ವಿರೋಧಿಸಿ ಏಕನಾಪುರಂ ಜನರು ನಡೆಸುತ್ತಿದ್ದ ಪ್ರತಿಭಟನೆಗೆ ಬೆಂಬಲ ಸೂಚಿಸಲು ವಿಜಯ್ ಅವರು 2025ರಲ್ಲಿ ಈ ಗ್ರಾಮಕ್ಕೆ ಭೇಟಿ ನೀಡಿದ್ದರು.
ಈ ವಿಮಾನ ನಿಲ್ದಾಣ ಯೋಜನೆಯನ್ನು 2022ರಲ್ಲಿ ಆಗಿನ ಡಿಎಂಕೆ ಸರ್ಕಾರವು ಕೈಗೆತ್ತಿಕೊಂಡಿತ್ತು.

