ನವದೆಹಲಿ (PTI): ಸಾಗರದಾಳದ ಕಾರ್ಯಾಚರಣೆಗೆ ನೆರವು ನೀಡುವ, ಅತ್ಯಾಧುನಿಕ ಸೌಲಭ್ಯದ ನೌಕೆ ಡಿಎಸ್‌ವಿ 'ನಿಪುಣ್' ಆಗಸ್ಟ್ 31ರಂದು ಮುಂಬೈನ ನೌಕಾನೆಲೆಯಲ್ಲಿ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಳ್ಳಲಿದೆ.
ಹಿಂದೂಸ್ತಾನ್ ಶಿಪ್‌ಯಾರ್ಡ್ ಲಿಮಿಟೆಡ್ (ಎಚ್‌ಎಸ್‌ಎಲ್) ನಿರ್ಮಿಸಿದ ಎರಡನೆಯ ಡಿಎಸ್‌ವಿ ಇದಾಗಿದೆ. ಮೊದಲ ನೌಕೆ 'ನಿಸ್ತಾರ್' ಇತ್ತೀಚೆಗೆ ನೌಕಾಪಡೆಗೆ ಸೇರ್ಪಡೆ ಆಗಿತ್ತು.
ಡಿಎಸ್‌ವಿ 'ನಿಪುಣ್' ಅನ್ನು ಆಳ ಸಮುದ್ರ ರಕ್ಷಣಾ ಕಾರ್ಯಾಚರಣೆಗಾಗಿ ಬಳಸಲಾಗುತ್ತದೆ. ಜಲಾಂತರ್ಗಾಮಿಗೆ 'ಮಾತೃ ನೌಕೆ'ಯ ರೀತಿಯಲ್ಲೂ ಇದು ಕಾರ್ಯನಿರ್ವಹಿಸಲಿದೆ.
ಸುಧಾರಿತ ರಕ್ಷಣಾ ತಂತ್ರಜ್ಞಾನ, ಪಥದರ್ಶಕ ವ್ಯವಸ್ಥೆ ಸೇರಿ ಹಲವು ವಿಶೇಷತೆಗಳ ಈ ನೌಕೆಯ ಸೇರ್ಪಡೆಯು ಭಾರತೀಯ ನೌಕಾಪಡೆಯ ಸಾಗರದಾಳದ ಕಾರ್ಯಾಚರಣೆ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಲಿದೆ ಎಂದು ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ.
ಪರೀಕ್ಷಾರ್ಥ ಕಾರ್ಯಾಚರಣೆಗಳ ಬಳಿಕ ಜುಲೈ 30ರಂದು 'ನಿಪುಣ್' ಅನ್ನು ಭಾರತೀಯ ನೌಕಾಪಡೆಗೆ ಹಸ್ತಾಂತರಿಸಲಾಗಿತ್ತು.
ಡಿಆರ್‌ಡಿಒ ಕ್ಷಿಪಣಿ ತಂತ್ರಜ್ಞಾನ ಹಸ್ತಾಂತರಕ್ಕೆ ಒಪ್ಪಿಗೆ
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿದ ಎಲ್ಲ ಸಾಂಪ್ರದಾಯಿಕ ಕ್ಷಿಪಣಿ ತಂತ್ರಜ್ಞಾನಗಳನ್ನು ಭಾರತದ ರಕ್ಷಣಾ ಉದ್ಯಮಕ್ಕೆ (ದೇಶದೊಳಗಿನ ಉತ್ಪಾದನೆಗಾಗಿ) ಹಸ್ತಾಂತರಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
'ರಕ್ಷಣಾ ವಲಯದಲ್ಲಿ ಸ್ವದೇಶಿ ಉದ್ಯಮಗಳ ಪಾಲುದಾರಿಕೆ ಪೋತ್ಸಾಹಿಸುವ ನಿಟ್ಟಿನಲ್ಲಿ ಇದು ಮಹತ್ವದ ಮೈಲಿಗಲ್ಲು ಆಗಲಿದೆ' ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
'ದೇಶದ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವುದು, ರಕ್ಷಣಾ-ಕೈಗಾರಿಕಾ ನೆಲೆಯನ್ನು ಬಲಪಡಿಸುವುದು, ಪೂರೈಕೆ ಸರಪಳಿಯಲ್ಲಿ ದೇಶದ ಎಂಎಸ್‌ಎಂಇ ಮತ್ತು ಇತರ ಪಾಲುದಾರರ ಭಾಗವಹಿಸುವಿಕೆಗೆ ಅವಕಾಶ ಸೃಷ್ಟಿಸುವುದು ಇದರ ಉದ್ದೇಶವಾಗಿದೆ' ಎಂದು ತಿಳಿಸಿದ್ದಾರೆ.

