ಕಠ್ಮಂಡು: ಟಿಬೆಟ್‌ನ ಗಡಿಯಲ್ಲಿರುವ, ನೇಪಾಳದ ರುಸುವಾ ಜಿಲ್ಲೆಯಲ್ಲಿ ಬುಧವಾರ ಸಂಭವಿಸಿದ ಭೀಕರ ಪ್ರವಾಹದಲ್ಲಿ, ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳಿದ್ದ 133 ಭಾರತೀಯರು, 37 ಅನಿವಾಸಿ ಭಾರತೀಯರು ಸೇರಿ 750ಕ್ಕೂ ಹೆಚ್ಚು ಯಾತ್ರಾರ್ಥಿಗಳು ನಾಪತ್ತೆಯಾಗಿದ್ದಾರೆ. ನೂರಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ.
ಟಿಬೆಟ್‌ನ ಭೋಟೆ ಕೋಶಿ ನದಿಯಲ್ಲಿ ಸಂಭವಿಸಿದ ದಿಢೀರ್ ಪ್ರವಾಹವು ನೇಪಾಳದ ನುವಾಕೋಟ್ ಮತ್ತು ಧಾಡಿಂಗ್ ಜಿಲ್ಲೆಗಳಲ್ಲಿ ಅಪಾರ ಹಾನಿ ಉಂಟುಮಾಡಿದೆ. ಟಿಬೆಟ್ ಗಡಿಯಿಂದ ರಭಸವಾಗಿ ನುಗ್ಗಿದ ಕೆಸರುಮಿಶ್ರಿತ ನೀರಿನಲ್ಲಿ ಹಿಮಾಲಯದ ತಪ್ಪಲಿನ ಹಲವು ಗ್ರಾಮಗಳು ಕೊಚ್ಚಿಕೊಂಡು ಹೋಗಿವೆ ಎಂದು ಸುದ್ದಿ ಸಂಸ್ಥೆ ಎಎಫ್‌ಪಿ ವರದಿ ಮಾಡಿದೆ.
ನೇಪಾಳ ಪ್ರವಾಸೋದ್ಯಮ ಮಂಡಳಿ ಪ್ರಕಾರ, 291 ವಿದೇಶಿಯರು, 93 ನೇಪಾಳಿ ಪ್ರಜೆಗಳು ಸೇರಿದಂತೆ ಕನಿಷ್ಠ 384 ಯಾತ್ರಿಕರು ಪ್ರವಾಹಬಾಧಿತ ಪ್ರದೇಶದಿಂದ ನಾಪತ್ತೆಯಾಗಿದ್ದಾರೆ. ಭಾರತ, ಅಮೆರಿಕ, ಮಲೇಷ್ಯಾ, ಬ್ರಿಟನ್, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನೆದರ್‌ಲೆಂಡ್ಸ್‌ನ ಪ್ರವಾಸಿಗರೂ ನಾಪತ್ತೆಯಾದವರಲ್ಲಿ ಸೇರಿದ್ದಾರೆ. ಇವರಲ್ಲಿ ಬಹುತೇಕರು ಪ್ರವಾಸ ಆಯೋಜಕ ಸಂಸ್ಥೆಗಳ ಮೂಲಕ ಕೈಲಾಸ ಮಾನಸ ಸರೋವರ ಯಾತ್ರೆಗೆ ಬಂದಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ನೇಪಾಳ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೊ ತುಣುಕುಗಳು ಪ್ರವಾಹದ ಭೀಕರ ರೂಪವನ್ನು ತೆರೆದಿಡುತ್ತವೆ. ಕೆಸರು, ಕಲ್ಲುಗಳು, ಕಟ್ಟಡಗಳ ಅವಶೇಷಗಳೊಂದಿಗೆ ನುಗ್ಗುತ್ತಿರುವ ನೀರು ಭೋಟೆ ಕೋಶಿ ನದಿ ಪಾತ್ರದುದ್ದಕ್ಕೂ ಹಾನಿ ಉಂಟುಮಾಡುತ್ತಿರುವುದು, ದಟ್ಟ ಮಂಜು ಆವರಿಸಿರುವುದು ಹಾಗೂ ಜನ ಭಯಭೀತರಾಗಿ ಓಡುತ್ತಿರುವ ದೃಶ್ಯಗಳನ್ನು ಕಾಣಬಹುದು. ಪ್ರವಾಹವು ಕೆಲವೇ ಕ್ಷಣಗಳಲ್ಲಿ ನೇಪಾಳದ ಮೂರು ಜಿಲ್ಲೆಗಳಲ್ಲಿ ಭಾರಿ ಅನಾಹುತ ಸೃಷ್ಟಿಸಿದೆ.
ಜಲವಿದ್ಯುತ್ ಯೋಜನೆಗಳಿಗೆ ಹಾನಿ
ಪ್ರವಾಹವು ಮಧ್ಯ ನೇಪಾಳದ ಜಿಲ್ಲೆಗಳಲ್ಲಿ ರಸ್ತೆಗಳು, ಮೂಲಸೌಕರ್ಯ ವ್ಯವಸ್ಥೆಯನ್ನು ವ್ಯಾಪಕವಾಗಿ ವಿನಾಶ ಮಾಡಿದೆ. 12ಕ್ಕೂ ಹೆಚ್ಚು ಜಲವಿದ್ಯುತ್ ಯೋಜನೆಗಳಿಗೆ ಹಾನಿಯನ್ನುಂಟು ಮಾಡಿದೆ. ರಸುವಾಗಧಿ, ಚಿಲಿಮೆ, ತ್ರಿಶೂಲಿ 3ಎ, ತ್ರಿಶೂಲಿ 3ಬಿ ಮತ್ತು ದೇವಿಘಾಟ್ ಜಲವಿದ್ಯುತ್ ಕೇಂದ್ರಗಳಿಗೆ ಹಾನಿಯಾಗಿದೆ ಎಂದು ನೇಪಾಳ ವಿದ್ಯುತ್ ಪ್ರಾಧಿಕಾರ (ಎನ್‌ಇಎ) ಹೇಳಿದೆ.
'ಹಾನಿ ಪ್ರಮಾಣ ನಿಖರವಾಗಿ ತಿಳಿದಿಲ್ಲ'
'ಹಾನಿಯ ಪ್ರಮಾಣ ನಿಖರವಾಗಿ ತಿಳಿದಿಲ್ಲ. ಹಾನಿಯ ವಿವರಗಳನ್ನು ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ. ಪ್ರವಾಹವು ಭೀಕರವಾಗಿದೆ. ಅದು ಊಹಿಸಲೂ ಸಾಧ್ಯವಾಗದ ರೀತಿಯಲ್ಲಿ ಹಾನಿ ಮಾಡಿರಬಹುದು' ಎಂದು ನೇಪಾಳ ಪೊಲೀಸ್ ವಕ್ತಾರ ಅಬಿ ನಾರಾಯಣ್ ಕಫ್ಲೆ ಹೇಳಿದ್ದಾರೆ.
ಬಿಹಾರ: ಎನ್‌ಡಿಆರ್‌ಎಫ್ ನಿಯೋಜನೆ
ನವದೆಹಲಿ: ನೇಪಾಳ ಪ್ರವಾಹದ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಿಹಾರ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದು, ರಾಜ್ಯದಲ್ಲಿ ಕೈಗೊಳ್ಳಬೇಕಿರುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸೂಚನೆ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯಾವುದೇ ತುರ್ತು ಪರಿಸ್ಥಿತಿ ಎದುರಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಪ್) ಸನ್ನದ್ಧವಾಗಿದೆ ಎಂದು ಮೂಲಗಳು ತಿಳಿಸಿವೆ.
ತುರ್ತು ಸಹಾಯ, ಮಾಹಿತಿ ಸಂಖ್ಯೆ
ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಪ್ರವಾಹದಿಂದ ತೊಂದರೆಗೆ ಒಳಗಾಗಿರುವ ಭಾರತೀಯರಿಗೆ ಸಹಾಯ ಮತ್ತು ಮಾಹಿತಿಗಾಗಿ ತುರ್ತು ಸಂಪರ್ಕ ಸಂಖ್ಯೆಯನ್ನು ಬಿಡುಗಡೆ ಮಾಡಿದೆ. +977 985 131 6807 ಅಥವಾ +977 970 910 7500 ಅನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ನೇಪಾಳ ಪ್ರವಾಸೋದ್ಯಮ ಮಂಡಳಿಯು ಸಹಾಯಕ್ಕಾಗಿ ಟೋಲ್ ಫ್ರೀ ಸಂಖ್ಯೆ 1234, ಹಾಟ್‌ಲೈನ್ 1144 ಅಥವಾ ಪ್ರವಾಸಿ ಪೊಲೀಸ್ 9851289445 ಸಂಖ್ಯೆಯನ್ನು ನೀಡಿದೆ.
ಕನಿಷ್ಠ 59 ಭಾರತೀಯರು ತಮ್ಮ ಸಂಸ್ಥೆ ಮೂಲಕ ಮಾನಸ ಸರೋವರ ಯಾತ್ರೆಗೆ ತೆರಳಿದ್ದರು ಎಂದು ಸಾಮ್ರಾಟ್ ಟೂರ್ಸ್ ಮತ್ತು ಟ್ರಾವೆಲ್ ಏಜೆನ್ಸಿ ತಿಳಿಸಿದೆ.
ಪ್ರಮುಖ ಅಂಶಗಳು
* ರಸುವಾ ಜಿಲ್ಲೆಯು ಕಠ್ಮಂಡುವಿನ ಈಶಾನ್ಯದಲ್ಲಿದೆ. ಟಿಬೆಟ್ ಗಡಿಯಿಂದ ಸುಮಾರು 125 ಕಿ.ಮೀ. ದೂರದಲ್ಲಿದೆ
* ಭೋಟೆ ಎಂದರೆ ಟಿಬೆಟಿಯನ್. ಭೋಟೆ ಕೋಶಿ ಎಂದರೆ 'ಟಿಬೆಟ್ ನದಿ' ಎಂದರ್ಥ
* ಬುಧವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ ಭೋಟೆ ಕೋಶಿ ನದಿಯ ಮೂಲಕ ಪ್ರವಾಹ ಉಕ್ಕಿ ಹರಿಯಿತು
* ರಕ್ಷಣಾ ಕಾರ್ಯಾಚರಣೆಗಾಗಿ ನೇಪಾಳ ಸೇನೆಯಿಂದ ಹೆಲಿಕಾಪ್ಟರ್, ವಿಪತ್ತು ನಿರ್ವಹಣಾ ಸಿಬ್ಬಂದಿ ನಿಯೋಜನೆ
ನರೇಂದ್ರ ಮೋದಿ ಪ್ರಧಾನಿ ನೇಪಾಳಕ್ಕೆ ಸಾಧ್ಯವಿರುವ ಎಲ್ಲ ಮಾನವೀಯ ನೆರವು ಒದಗಿಸುತ್ತೇವೆ. ಅಲ್ಲಿನ ಸಹೋದರ ಸಹೋದರಿಯರೊಂದಿಗೆ ಭಾರತೀಯರು ಒಗ್ಗಟ್ಟಿನಿಂದ ನಿಲ್ಲುತ್ತಾರೆಷಿ ಜಿನ್‌ಪಿಂಗ್ ಚೀನಾ ಅಧ್ಯಕ್ಷ ಚೀನಾ-ಟಿಬೆಟ್-ನೇಪಾಳ ಗಡಿ ಪ್ರದೇಶದಲ್ಲಿ ಪ್ರವಾಹದಿಂದ ಕಾಣೆಯಾದವರ ರಕ್ಷಣೆಗೆ ಸರ್ವ ಪ್ರಯತ್ನ ನಡೆಸಲಾಗುವುದು. ಪರಿಹಾರ ಕಾರ್ಯಕ್ಕೆ ಆದೇಶಿಸಲಾಗಿದೆಬಾಲೇಂದ್ರ ಶಾ ನೇಪಾಳ ಪ್ರಧಾನಿ ದಯವಿಟ್ಟು ತಾಳ್ಮೆಯಿಂದಿರಿ. ನಿಮ್ಮ ರಕ್ಷಣೆ ಚಿಕಿತ್ಸೆ ಆಹಾರ-ಆಶ್ರಯದ ಸಂಪೂರ್ಣ ಜವಾಬ್ದಾರಿಯನ್ನು ಸರ್ಕಾರ ತೆಗೆದುಕೊಳ್ಳುತ್ತದೆ. ವಿಪತ್ತಿನ ಸಮಯದಲ್ಲಿ ಒಟ್ಟಾಗಿ ನಿಲ್ಲೋಣಹಿಮಪಾತದಿಂದ ಪ್ರವಾಹ
ನೇಪಾಳ-ಚೀನಾ ಗಡಿಯ ಈಶಾನ್ಯಕ್ಕೆ ಸುಮಾರು 20 ಕಿ.ಮೀ. ದೂರದಲ್ಲಿರುವ ಲೆಂಡೆ ಖೋಲಾ ನದಿಯಲ್ಲಿ ಸಂಭವಿಸಿದ ಹಿಮಪಾತವೇ ಪ್ರವಾಹಕ್ಕೆ ಕಾರಣ ಎನ್ನಲಾಗಿದೆ. ಟಿಬೆಟ್ ಗಡಿಯಲ್ಲಿ ಸಂಭವಿಸಿದ ಭೂಕಂಪದಿಂದ ಹಿಮದ ಬಂಡೆಗಳು ಲಿಂಡೆ ನದಿಗೆ ಉರುಳಿದ್ದು ಲೆಂಡೆ ತ್ರಿಶೂಲಿ ಭೋಟೆ ಕೋಶಿ ನದಿಯಲ್ಲಿ ದಿಢೀರ್ ನೀರಿನ ಹರಿವು ಹೆಚ್ಚಾಯಿತು ಎಂದು ನೇಪಾಳದ ವಿಪತ್ತು ನಿರ್ವಹಣೆ ಪ್ರಾಧಿಕಾರ ಪ್ಲಾನೆಟ್ ಲ್ಯಾಬ್ಸ್ ನಡೆಸಿದ ವಿಶ್ಲೇಷಣೆಯನ್ನು ಉಲ್ಲೇಖಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

